ಧಾರವಾಡ: ಒಂದೆಡೆ ಮಕ್ಕಳಿಗೆ ನೀಡಲಾಗುವ "ಪುಷ್ಠಿ" ಪೌಷ್ಟಿಕ ಆಹಾರದ ಪ್ಯಾಕೇಟ್‌ನಲ್ಲಿ ಕಂಡು ಬಂದ ನುಸಿ. ಮತ್ತೊಂದೆಡೆ ಆಹಾರ ಪೊಟ್ಟಣದ ಅವಧಿಯೇ ಮುಕ್ತಾಯದ ಹಂತದಲ್ಲಿದೆ. ಮಕ್ಕಳಿಗೆ ಕ್ಯಾರಿಬ್ಯಾಗ್‌ನಲ್ಲಿ ಸಕ್ಕರೆ ಹಾಗೂ ಹಾಲಿನ ಪುಡಿ ಕಟ್ಟಿಕೊಟ್ಟ ಅಂಗನವಾಡಿ ಸಿಬ್ಬಂದಿ. ಇದೆಲ್ಲ ಕಂಡು ಬಂದದ್ದು ಧಾರವಾಡದ ಕೆಲಗೇರಿಯಲ್ಲಿ.
ಹೌದು! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಸ್ಟೋರಿ ನೋಡಲೇಬೇಕು. ಒಂದೆಡೆ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿವೆ. ಮತ್ತೊಂದೆಡೆ ಅಂಗನವಾಡಿ ಕೇಂದ್ರಗಳಲ್ಲಿ ಪುಟಾಣಿ ಮಕ್ಕಳಿಗೆ ಅವಧಿ ಮುಗಿದ ಆಹಾರದ ಪೊಟ್ಟಣ ವಿತರಿಸಲಾಗುತ್ತಿದೆ. ಧಾರವಾಡದ ಕೆಲಗೇರಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ನಿನ್ನೆಯಷ್ಟೇ ಮಕ್ಕಳಿಗೆ "ಪುಷ್ಠಿ" ಎಂಬ ಪೌಷ್ಟಿಕ ಆಹಾರದ ಪೊಟ್ಟಣ ನೀಡಲಾಗಿದೆ.
ಈ ಪೊಟ್ಟಣದ ಅವಧಿ 1 ತಿಂಗಳವರೆಗೆ ಇರುತ್ತದೆ. ಆದರೆ, ನಿನ್ನೆಯಷ್ಟೇ ಮಕ್ಕಳಿಗೆ ಈ ಆಹಾರದ ಪೊಟ್ಟಣ ವಿತರಿಸಲಾಗಿದೆ. ಈ ಪೊಟ್ಟಣದ ಅವಧಿ ಇನ್ನು ನಾಲ್ಕು ದಿನದಲ್ಲಿ ಮುಕ್ತಾಯವಾಗುತ್ತದೆ. ಈ ಆಹಾರ ಪೊಟ್ಟಣ ಕೊಡುವುದನ್ನೇ ಸಿಬ್ಬಂದಿ ತಡ ಮಾಡಿದ್ದಾರೆ. ನಾಲ್ಕು ದಿನದಲ್ಲಿ ಅದರ ಅವಧಿ ಮುಕ್ತಾಯಗೊಂಡರೆ ಅದು ಡೇಟ್ ಬಾರ್ ಆದಂತೆ. ಅಷ್ಟೇ ಅಲ್ಲ, ಈ ಆಹಾರದ ಪೊಟ್ಟಣದಲ್ಲಿ ನುಸಿಗಳು ಸಹ ಕಂಡು ಬಂದಿದ್ದು, ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಕ್ಕಳಿಗೆ ಪ್ಲಾಸ್ಟಿಕ್ ಹಾಳೆಗಳಲ್ಲಿ ಹಾಲಿನ ಪುಡಿ ಹಾಗೂ ಸಕ್ಕರೆ ಕಟ್ಟಿ ಕೊಡಲಾಗುತ್ತದೆ. ಆ ಹಾಲಿನ ಪುಡಿಯ ಅವಧಿ ಎಲ್ಲಿಯವರೆಗೆ ಇತ್ತು ಎಂಬುದೇ ಗೊತ್ತಾಗುವುದಿಲ್ಲ. ಇದನ್ನು ಪ್ರಶ್ನೆ ಮಾಡಲು ಹೋದರೆ ನೀವು ಮೇಲಿನ ಅಧಿಕಾರಿಗಳನ್ನು ಕೇಳಿ ಎನ್ನುವ ಸಬೂಬನ್ನು ಸಿಬ್ಬಂದಿ ಹೇಳುತ್ತಾರಂತೆ. ಇಂತಹ ಆಹಾರ ಸೇವಿಸಿದ ಅನೇಕ ಮಕ್ಕಳಿಗೆ ಹೊಟ್ಟೆನೋವು ಸಹ ಬಂದಿದೆಯಂತೆ. ಇದನ್ನೇ ಅಧಿಕಾರಿಯನ್ನು ಪ್ರಶ್ನಿಸಿದರೆ, ಅಂತಹ ಆಹಾರ ಕೊಟ್ಟಿದ್ದರೆ ಕೂಡಲೇ ಅದನ್ನು ಹಿಂಪಡೆಯಲಾಗುವುದು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎನ್ನುತ್ತಾರೆ.
ಒಂದು ತಿಂಗಳ ಮುಂಚೆಯೇ ಕೊಡಬೇಕಾದ ಆಹಾರದ ಪ್ಯಾಕೇಟ್‌ನ್ನು ತಿಂಗಳು ಮುಗಿಯುವ ಹಂತದಲ್ಲಿ ಕೊಡುವುದು ಏಕೆ? ಅಷ್ಟರಲ್ಲಾಗಲೇ ಅದು ಡೇಟ್ ಬಾರ್ ಆಗಿರುತ್ತದೆ. ಅದನ್ನು ತಿಂದು ಮಕ್ಕಳಿಗೆ ಏನಾದರೂ ಹೆಚ್ಚೂ ಕಡಿಮೆಯಾದರೆ ಗತಿ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದರತ್ತ ಗಮನ ಹರಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/12/2024 09:51 pm