ಬೀದರ್ : ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬೆಳೆಯುತ್ತಾರೆ. ಸಕಾಲಕ್ಕೆ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಪ್ರಭು.ಬಿ ಚವ್ಹಾಣ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು, 2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬೆಳಗಾವಿ, ಬೀದರ, ಧಾರವಾಡ, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯಾದ ಕೆಓಎಫ್ ಸಂಸ್ಥೆಯ ವತಿಯಿಂದ ಒಟ್ಟು 136 ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆ ಪ್ರತಿ ಕ್ವಿಂಟಾಲಿಗೆ 4892 ರಂತೆ 2024ರ ಡಿಸೆಂಬರ್ 2ರ ಅಂತ್ಯಕ್ಕೆ 10,402 ನೋಂದಾಯಿತ ರೈತರ ಪೈಕಿ 3201 ರೈತರಿಂದ 40,055 ಕ್ವಿಂಟಾಲ್ ಗಳಷ್ಟು ಸೋಯಾಬಿನ್ ಖರೀದಿಸಲಾಗಿದೆ.
ಬೀದರ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 80 ಖರೀದಿ ಕೇಂದ್ರಗಳನ್ನು ತೆರೆದು, 2024ರ ಡಿಸೆಂಬರ್ 2ರ ಅಂತ್ಯಕ್ಕೆ 7320 ನೋಂದಾಯಿತ ರೈತರ ಪೈಕಿ 1977 ರೈತರಿಂದ 22,986 ಕ್ವಿಂಟಾಲ್ ಗಳಷ್ಟು ಸೋಯಾಬೀನ್ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
20/12/2024 05:37 pm