ಮಂಡ್ಯ : ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿಟಿ ರವಿ ಬಂಧನದ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ,ಅವಾಚ್ಯ ಪದ ಬಳಕೆ ಆರೋಪ ಸುಳ್ಳಾಗಿದ್ದರೆ ಸಿ.ಟಿ.ರವಿಯವರ ಬಂಧನವೇಕಾಯಿತು ಎಂದು ಪ್ರಶ್ನಿಸಿದರು.
ಹೆಣ್ಣುಮಕ್ಕಳಿಗೆ ಇಷ್ಟು ಕೆಟ್ಟ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿಯವರು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ. ಅಷ್ಟು ಕೆಟ್ಟ ಮಾತು ಆಡಿರುವುದಕ್ಕೆ ಸಾಕ್ಷಿಯಾದ ಆಡಿಯೊ, ವಿಡಿಯೊ ಇದೆ ಎಂದು ಹೇಳಿದ್ದಾರೆ. ಆದರೆ ನಾನು ಅದನ್ನು ನೋಡಿಲ್ಲ ಎಂದರು.
ಸಿ.ಟಿ.ರವಿಯವರು ತಾನು ‘ಪ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಇದು after thought ಮಾತು. ಈಗ ಆ ರೀತಿ ಹೇಳುತ್ತಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವಾಗಿರುವುದಕ್ಕೇ ಸಚಿವರು ದೂರು ನೀಡಿದ್ದಾರೆ ಎಂದರು.
ಸಿಟಿ ರವಿ ಆಡಿದ ಕೆಟ್ಟ ಮಾತನ್ನು ಕೇಳಿರುವುದಾಗಿ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು , ಪದಬಳಕೆಯಾಗಿರುವುದು ಸತ್ಯ ಎಂದರು. ಎಫ್ ಐ ಆರ್ ದಾಖಲಾದ ಮೇಲೆ ಪೊಲೀಸರು ತನಿಖೆ ನಡೆಸಲೇಬೇಕಾಗುತ್ತದೆ.
ಕಾನೂನಿನ ಕ್ರಮ ಮಾಡಲೇಬೇಕಾಗುತ್ತದೆ. ಸಿ.ಟಿ.ರವಿ ವಿರುದ್ಧ ಆಕ್ರೋಶಗೊಂಡಿದ್ದ ಜನರು ಬೆಳಗಾವಿಯಲ್ಲಿದ್ದ ಕಾರಣದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದರು.
PublicNext
20/12/2024 02:13 pm