ಹಾವೇರಿ: ಶಹನಾಹಿ ಎಂದ ತಕ್ಷಣ ನೆನಪಾಗುವುದು ಭಾರತ ರತ್ನ ಬಿಸ್ಮಿಲ್ಲಾಖಾನ್.ಇಂತಹ ಮಹಾನ್ ಕಲಾವಿದರ ಶಿಷ್ಯರ ಬಳಿ ಶಹನಾಹಿ ವಾದನ ಕಲಿತು ಕರ್ನಾಟಕದ ಬಿಸ್ಮಿಲ್ಲಾಖಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಗ್ರಾಮದ ಬಸವರಾಜ್ ಭಜಂತ್ರಿ. 72ರ ಇಳಿವಯಸ್ಸಿನಲ್ಲಿ ಸಹ ಭಜಂತ್ರಿ ಶಹನಾಹಿ ವಾದನಕ್ಕೆ ನಿಂತರೆ ಯುವಕರನ್ನೇ ನಾಚಿಸುವಂತೆ ನುಡಿಸುತ್ತಾರೆ. 2013 ರಲ್ಲಿ ಶಹನಾಹಿ ವಾದನಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಸವರಾಜ್ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ತಮ್ಮ ತಾತ ಮುತ್ತಾತರ ಗರಡಿಯಲ್ಲಿ ಶಹನಾಹಿ ನುಡಿಸುತ್ತಿದ್ದ ಬಸವರಾಜ್ 1972 ರಲ್ಲಿ ಧಾರವಾಡದಲ್ಲಿ ಭಾರತ ರತ್ನ ಬಿಸ್ಮಿಲ್ಲಾಖಾನ್ ಕಾರ್ಯಕ್ರಮ ವೀಕ್ಷಿಸಿದ್ದರು. ಅಂದೇ ತಾವು ಸಹ ಶಹನಾಹಿ ವಾದನ ನುಡಿಸಿದರೆ ಬಿಸ್ಮಿಲ್ಲಾಖಾನರಂತೆ ನುಡಿಸಬೇಕು ಎಂಬ ಛಲದಿಂದ ಶಹನಾಹಿ ವಾದನ ಕಲಿಯಲು ಮುಂದಾದರು. ಅದಾದ ನಂತರ ಬಸವರಾಜ್ ಹಿಂತಿರುಗಿ ನೋಡಿಲ್ಲ. ಶಹನಾಹಿಯಲ್ಲಿ ಹಲವು ಅಪ್ರಚಲಿತ ರಾಗಗಳನ್ನು ಬಸವರಾಜ್ ತಮ್ಮ ಶಹನಾಹಿಯಲ್ಲಿ ನುಡಿಸುತ್ತಾರೆ. ತಾವೇ ಒಂದು ಹೊಸದಾಗಿ ಪುಟ್ಟರಾಜ ಪ್ರಿಯ ರಾಗ ಹುಟ್ಟು ಹಾಕಿದ್ದಾರೆ.
ಶಹನಾಹಿಯಲ್ಲಿ ಮಾಂದ್ರದಲ್ಲಿ ನುಡಿಸುವುದು ಬಹಳ ಕಷ್ಟ. ಅಂತದ್ದರಲ್ಲಿ ಮಾಂದ್ರದಲ್ಲಿ ನುಡಿಸುವ ಮೂಲಕ ಆಶ್ಚರ್ಯ ಮೂಡಿಸುತ್ತಾರೆ ಬಸವರಾಜ್. ಇವರು ಭೀಮಸೇನ ಜೋಶಿ,ರಘುನಾಥ್ ನಾಕೋಡ ಪ್ರವೀಣ ಗೋಡ್ಕಿಂಡಿ ಸೇರಿದಂತೆ ಖ್ಯಾತ ಸಂಗೀತಗಾರರ ಜೊತೆ ಜುಗಲ್ ಬಂದಿ ನೀಡಿದ್ದಾರೆ. ಅವರ ಜೊತೆ ಹಲವು ವೇದಿಕೆಗಳನ್ನು ಹಂಚಿಕೊಂಡಿದ್ದಾರೆ. ದೇಶವಿದೇಶಗಳಲ್ಲಿ ಇವರ ಶಿಷ್ಯರಿದ್ದಾರೆ. ತಮಗೆ ಬಂದ ಸರ್ಕಾರಿ ನೌಕರಿಯನ್ನು ಬಿಟ್ಟು ಸಂಗೀತ ಸೇವೆಗೆ ನಿಂತಿದ್ದಾರೆ ಬಸವರಾಜ್.
PublicNext
20/12/2024 09:13 am