ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಇಲ್ಲಿನ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಸತತ ಒಂದು ವಾರದಿಂದ ಬಾಗಿಲನ್ನೇ ತೆರೆಯದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ರಾಮ ಸಹಾಯಕರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಗ್ರಾಮ ಆಡಳಿತ ಅಧಿಕಾರಿ ಸತತ ಒಂದು ವಾರದಿಂದ ಕಚೇರಿಯ ಬಾಗಿಲನ್ನೇ ತೆರೆಯದೆ ಸಾರ್ವಜನಿಕರ ಸಮಸ್ಯೆಯನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಗ್ರಾಮ ಆಡಳಿತ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ಅವರನ್ನು ಪ್ರಶ್ನೆ ಮಾಡಿದರೆ ಜಾತಿನಿಂದನೆ /ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತೀರಿ ಎನ್ನುವ ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.
ಇದರಿಂದಾಗಿ ಗ್ರಾಮಸ್ಥರು ಗ್ರಾಮ ಆಡಳಿತ ಅಧಿಕಾರಿಯ ಕಚೇರಿಗೆ ಹೋಗಲು ಭಯಪಡುವಂತಾಗಿದೆ.ನಾಲ್ಕೂರು ಗ್ರಾಮದಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರೇ ಇದ್ದು ತಾರಿಕಟ್ಟೆ ,ನಂಚಾರುವಿನಿಂದ ಬರುವ ಗ್ರಾಮಸ್ಥರು ವಾಹನ ಬಾಡಿಗೆ ಮಾಡಿಕೊಂಡು ಬಂದು ಬೆಳಿಗ್ಗೆಯಿಂದ ಸಂಜೆವರೆಗೆ ಕಾದು ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಲು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಹಿಂದಿನ ಗ್ರಾಮಸಭೆಯಲ್ಲಿ ಇಡೀ ಗ್ರಾಮಸ್ಥರೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದ್ದಾರೆ. ಎಷ್ಟು ದೂರು ನೀಡಿದರೂ ಇಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ತಕ್ಷಣ ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಲ್ಕೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುರೇಶ್ ಕೊಠಾರಿ ಆಗ್ರಹಿಸಿದ್ದಾರೆ.
Kshetra Samachara
19/12/2024 10:27 pm