ಬೈಲಹೊಂಗಲ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ವಿಷಯವನ್ನು ಪ್ರಸ್ತಾಪಣೆ ಮಾಡಬೇಕೆಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಮಾದಿಗ ಮೀಸಲಾತಿ ತಾಲೂಕು ಸಮಿತಿ ಅಧ್ಯಕ್ಷ ಶಂಕರೆಪ್ಪ ಕೋರಿಕೊಪ್ಪ ಮಾತನಾಡಿ, ಒಳ ಮೀಸಲಾತಿ ಪರಿಶಿಷ್ಟ ಜಾತಿಗಳ ನೂರೊಂದು ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡುತ್ತದೆ. ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಶಿಪಾರಸ್ಸು ಮಾಡುವ ನಿರ್ಧಾರ ಮಾಡಿತು. ಅಗಸ್ಟ 1 ರಂದು ಸುಪ್ರೀಂ ಕೋರ್ಟ ಸಂವಿಧಾನ ಪೀಠ ಒಳ ಮೀಸಲಾತಿಯನ್ನು ಜಾರ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು.
ತೀರ್ಪು ಬಂದು 4 ತಿಂಗಳೂ ಕಳೆದರೂ ರಾಜ್ಯ ಸರ್ಕಾರ ಆಮೆಗತಿಯಲ್ಲಿ ಸಾಗಿದೆ. ಕಾಟಾಚರಕ್ಕೆ ನ್ಯಾ. ನಾಗಮೋಹನ ದಾಸ ಆಯೋಗ ರಚಿಸಿದ್ದು ಬಿಟ್ಟರೆ ಯಾವ ಕೆಲಸ ಕಾರ್ಯಗಳಾಗಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. 45 ದಿನಗಾಳದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೊಡದೆ ಕಾಲಹರಣ ಮಾಡುತ್ತಿದೆ. ಈ ನಿಧಾನಗತಿಯ ನಿರ್ಲಕ್ಷ ಧೋರಣೆ ನೋಡಿದರೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೆವೆಂದು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಗೆ ವಿಶ್ವಾಸದ್ರೋಹ ಎಸಗಿದ್ದಾರೆ.
ಒಳಮೀಸಲಾತಿ ಆಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಅದು ಜಾರಿಯಾಗಿಲ್ಲ. ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ದಿ.16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೋತ್ತಾಯ ಸಮಾವೇಶಕ್ಕೆ ಕರೆ ನೀಡಲಾಗಿದೆ ಎಂದರು.
ಸಂಜೀವ ಮುರಗೋಡ, ರುದ್ರಪ್ಪ ಮುಂದಿನಮನಿ, ಸುರೇಶ ಮಲಕಿನಕೊಪ್ಪ, ರಾಯಪ್ಪ ಕೆಂಚಪ್ಪನವರ, ಫಕೀರಪ್ಪ ಹರಿಜನ, ಶಿವಯೋಗಿ ಹುಲ್ಲೇನ್ನವರ, ರಮೇಶ ಹುಲ್ಲೇನ್ನವರ, ಸುನೀಲ ಹಲಗಿ, ಶ್ರೀಕಾಂತ ಮಾದರ, ಕರಿಯಪ್ಪ ಮಾದರ, ರಮೇಶ ಹಂಚಿನಮನಿ, ಶ್ರೀನಿವಾಸ ಭರಮಣ್ಣವರ, ಸಂಜು ಭರಮಣ್ಣವರ, ರಮೇಶ ಹರಿಜನ ಇದ್ದರು.
Kshetra Samachara
14/12/2024 03:21 pm