ಮುಳಬಾಗಿಲು- ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಔಷಧ ನಿಯಂತ್ರಣ ಇಲಾಖೆಯ ಒಬ್ಬ ಅಧಿಕಾರಿಯನ್ನು ಅಮಾನತ್ತು ಪಡಿಸಲಾಗಿದೆ. ನಮ್ಮ ವ್ಯವಸ್ಥೆಯ ವೈಫಲ್ಯಗಳಿಂದ ಆಗಿರುವ ಘಟನೆ ಎನ್ನಬಹುದು. ಈಗಾಗಲೇ ಒಬ್ಬರನ್ನು ಅಮಾನತ್ತು ಮಾಡಿ, ನೋಟಿಸ್ ಜಾರಿ ಮಾಡಲಾಗಿದೆ. ಔಷಧಿ ಪೂರೈಕೆ ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಮುದಾಯದ ಆರೋಗ್ಯ ಕೇಂದ್ರ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪಶ್ಚಿಮ ಬಂಗಾಳದ ಔಷಧಿ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದು, ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ಥೆ ಸರಿಪಡಿಸಲು ಫುಡ್ ಆಂಡ್ ಡ್ರಗ್ ಕಂಟ್ರೋಲ್ ಗೆ ಐಎಎಸ್ ಅಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 327 ಬಾಣಂತಿಯರು ಮೃತ ಪಟ್ಟಿದ್ದಾರೆ. ಈ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
PublicNext
07/12/2024 07:38 am