ಮುಳಬಾಗಿಲು- ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹರಿಹಾಯ್ದರು. ಮುಳಬಾಗಿಲಿನ ಕುರುಡುಮಲೆ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್. ಒಳಗಿನ ದುಷ್ಟಶಕ್ತಿ ಈ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕೆಲಸ ಮಾಡ್ತಿದ್ದಾರೆ. ಇನ್ನು ಲಫೂಟ್ ಎಂಬ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಬಗ್ಗೆ ಹಗುರವಾಗಿ ಮಾತನಾಡ ಬೇಡ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.
ನೀನೊಬ್ಬ ಗೋಮುಖ ವ್ಯಾಘ್ರ, ನೀವು ಮುಖವಾಡ ಹಾಕಿಕೊಂಡಿದ್ದೀರಾ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಇಫ್ತಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳ್ತೀಯಾ. ನಿನಗೆ ಮಾನ ಮರ್ಯಾದೆ ಇದ್ರೆ, ಬಾಯಿ ಬಿಚ್ಚಿದ್ರೆ ಅಷ್ಟೇ. ನಾವೂ ನಾಟಿ, ನಾನು ಮಾತನಾಡ್ತೀನಿ ಎಂದು ರೇಣುಕಾಚಾರ್ಯ ಯತ್ನಾಳ್ ವಿರುದ್ಧ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಹಾಗೂ ದಿವಂಗತ ಅನಂತ ಕುಮಾರ್. ಪರಿಶ್ರಮ ಪಟ್ಟು ಭಾರತೀಯ ಜನತಾ ಪಾರ್ಟಿ ಕಟ್ಟಿದವರ ವಿರುದ್ಧ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ಹಿಂದೂ ನಾಯಕ. ಯತ್ನಾಳ್ ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ. ವಕ್ಫ್ ವಿರುದ್ಧ ಹೋರಾಟ ಮಾಡು ಅಂತ ರಾಷ್ಟ್ರೀಯ ನಾಯಕರು ಯಾರೂ ಹೇಳಿಲ್ಲ. ಬಿ.ವೈ. ವಿಜಯೇಂದ್ರ ಮುಂದೆ ರಾಜ್ಯದ ಸಿಎಂ ಆಗಲಿ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಗುಡುಗಿದ್ದಾರೆ.
PublicNext
29/11/2024 07:06 pm