ಬೀದರ್: ರಾಜ್ಯದಲ್ಲಿ ಆನ್‌ಲೈನ್ ಆಟಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನೆಯ ವತಿಯಿಂದ ಗುರುವಾರ ಹುಲಸೂರ ಪಟ್ಟಣದ ತಹಶೀಲ್ದಾರ್ ಹಾಗೂ ತಾಲ್ಲೂಕ ಪಂಚಾಯತ ಇಓ ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿಲ್ಲೆ ಸೇರಿದಂತೆ ಇಡೀ ರಾಜ್ಯಾದ್ಯಂತ ವಿದ್ಯಾರ್ಥಿ ಮತ್ತು ಯುವ ಸಮುದಾಯದ ಬದುಕು ಹಾಳು ಮಾಡುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ(ರಮ್ಮಿ) ಆಟಗಳನ್ನು ನಿಷೇಧಿಸಬೇಕು ಎಂದು ಕರ್ನಾಟಕ ಸೇನೆ ಒತ್ತಾಯಿಸಿದೆ.
ಸೇನೆಯ ತಾಲ್ಲೂಕ ಅಧ್ಯಕ್ಷ ದಯಾನಂದ ನಿಮಾಣೆ ಮಾತನಾಡಿ, ರಾಜ್ಯದಲ್ಲಿ ಆನ್‌ಲೈನ್ ಗೇಮ್ ರದ್ದುಪಡಿಸಲು ಸರಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೆಳಗಾವಿಯ ಅಧಿವೇಶನದಲ್ಲಿ ನಮ್ಮ ಜಿಲ್ಲಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆನ್ಲೈನ್ ಬೆಟ್ಟಿಂಗ್, ಜೂಜಾಟ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳು, ಯುವಕರು ದಾರಿ ತಪ್ಪುತ್ತಿದ್ದಾರೆ. ಆನ್‌ಲೈನ್ ಗೇಮ್ ಚಟಕ್ಕೆ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಪಾಲಕರು ಕೂಡಿಟ್ಟ ಹಣವನ್ನು ಆನ್ ಲೈನ್ ಗೇಮ್‌ನಲ್ಲಿ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಕೂಡಲೇ ಸಿಕ್ಕಿಂ, ಮೇಘಾಲಯ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಂಪೂರ್ಣವಾಗಿ ಆನ್ಲೈನ್ ಗೇಮ್ ರದ್ದುಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಲೋಕೇಶ ಧಬಾಲೆ, ಶಂಕರ ಗೌಡಗಾಂವೆ, ಸಚಿನ ಕವಟೆ, ಜಗದೀಶ ತೊಂಪೆ, ಎಂ ಡಿ ಅಫರೋಜ್ ,ಸುನಿಲ ವರಂಡೆ, ಆನಂದ ಮೇತ್ರೆ, ಅಬ್ರಾರ್ ಸೌದಾಗರ, ಜಮೀರ್, ಕೃಷ್ಣಾ ಮೇತ್ರೆ , ಸುಬ್ಬು ಜಾಧವ ಸೇರಿ ಹಲವರು ಉಪಸ್ಥಿತರಿದ್ದರು.
Kshetra Samachara
05/12/2024 06:48 pm