ಬೆಂಗಳೂರು : ಶಾಸಕ ಮುನಿರತ್ನ ಮೇಲೆ ಇಂದು ಆರ್ ಆರ್ ನಗರ ಕ್ಷೇತ್ರದ ಲಕ್ಷ್ಮಿ ದೇವಿನಗರದಲ್ಲಿ ಮೊಟ್ಟೆ ಎಸೆತ ನಡೆದಿದೆ. ಘಟನೆಗೆ ಡಿಕೆ ಬ್ರದರ್ಸ್ ಮತ್ತು ಹನುಮಂತರಾಯಪ್ಪ ಕಾರಣ ಎಂದು ಮುನಿರತ್ನ ಆರೋಪಿಸಿದ್ದಾರೆ.
ಮುನಿರತ್ನ ಆರೋಪಕ್ಕೆ ತಿರುಗೇಟು ನೀಡಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ, ಮೊಟ್ಟೆ ಅಟ್ಯಾಕ್ ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿ ಆರೋಪ ಮಾಡಿರುವ ಕುಸುಮ ಹನುಮಂತರಾಯಪ್ಪ ಮುನಿರತ್ನ ವಿರುದ್ಧ ವಾಗ್ದಾಳಿ ಸಹ ನಡೆಸಿದ್ದಾರೆ. ದಲಿತರನ್ನು ತುಚ್ಚವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ FSL ರಿಪೋರ್ಟ್ ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ತರಹೇವಾರಿ ನಾಟಕಗಳು ಶುರುವಾಗಿದೆ.
ಜನರೆದುರು ತನ್ನ ನಿಜರೂಪ ಬೆತ್ತಲಾದ ನಂತರ ಸಿಂಪತಿ ಗಿಟ್ಟಿಸಿಕೊಳ್ಳಲು "ಇಮೇಜ್ ಬಿಲ್ಡಿಂಗ್" ಆಕ್ಟಿವಿಟಿಯ ಒಂದು ಭಾಗವೇ ಇಂದಿನ ಪ್ರಹಸನಗಳು. ಈತನ ಸ್ಕ್ರಿಪ್ಟೆಡ್ ಸ್ಟೋರಿಗಳು ಅಲ್ಪ ವಿರಾಮದ ಬಳಿಕ ಮತ್ತೆ ಚಾಲ್ತಿಗೆ ಬಂದಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆಯೇ ಕಡಿಮೆ ಇಂತಹ ಸನ್ನಿವೇಶದಲ್ಲಿ ಸ್ವಚ್ಚ ರಾಜಕಾರಣದ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕನಸುಗಳಿಗೆ ಬೆಲೆಯಿಲ್ಲವೆನಿಸುತ್ತದೆ.
ಈ ನಾಟಕಗಳನ್ನು ಗಮನಿಸಿದರೆ ಕೊಚ್ಚೆಯಲ್ಲಿ ಹೊರಳಾಡುವ ಹಂದಿಯ ಜೊತೆ ಹಂದಿಗಳಾಗಿಯೇ ಇರಬೇಕಾ ಎಂಬ ಪ್ರಶ್ನೆಯ ಜೊತೆ ಅಸಹ್ಯ ಮೂಡುತ್ತಿದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈತನ ಪಾಪದ ಕೆಲಸಗಳಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ, ಆದರೆ ತನ್ನ ತಪ್ಪು ಮುಚ್ಚಿಕೊಳ್ಳಲು ನನ್ನ ಹೆಸರನ್ನು ವಿನಾಕಾರಣ ಎಳೆದು ತರುವುದು ಎಷ್ಟು ಸರಿ? ಇಂದಿನ ಪ್ರಹಸನದ ಹಿಂದಿನ ದುರುದ್ದೇಶಗಳನ್ನು ಅರಿಯದೆ ಈತನ ಕತೆಗಳನ್ನು ನಂಬುವಷ್ಟು ನಮ್ಮ ಜನರು ದಡ್ಡರೂ, ಮೂರ್ಖರೂ ಅಲ್ಲ.
ಕಾಲಾಯ ತಸ್ಮೈ ನಮಃ ಎಂದು ಟ್ವಿಟ್ ಮಾಡಿ ಮುನಿರತ್ನಗೆ ಕುಸುಮ ಹನುಮಂತರಾಯಪ್ಪ ತಿರುಗೇಟು ನೀಡಿದ್ದಾರೆ.
PublicNext
25/12/2024 07:10 pm