ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗ ತನ್ನ 26 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಜಂಗಪುರದಿಂದ ಎಎಪಿಯ ಮನೀಶ್ ಸಿಸೋಡಿಯಾ ವಿರುದ್ಧ ಫರ್ಹಾದ್ ಸೂರಿ ಅವರನ್ನು ಕಣಕ್ಕಿಳಿಸಿದೆ.
ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಎಎಪಿಯ ಮಾಜಿ ಶಾಸಕರಾದ ಅಸೀಂ ಖಾನ್ ಮತ್ತು ದೇವೀಂದ್ರ ಸೆಹ್ರಾವತ್ ಅವರಿಗೂ ಟಿಕೆಟ್ ನೀಡಲಾಗಿದೆ. ಅಸೀಂ ಖಾನ್ ಅವರನ್ನು ಮತಿಯಾ ಮಹಲ್‌ನಿಂದ ಕಣಕ್ಕಿಳಿಸಿದರೆ, ಬಿಜ್ವಾಸನ್‌ನಿಂದ ಸೆಹ್ರಾವತ್‌ಗೆ ಟಿಕೆಟ್ ನೀಡಲಾಗಿದೆ.
ಶಕುರ್ ಬಸ್ತಿಯಿಂದ ಸತೀಶ್ ಲೂತ್ರಾ, ಸೀಮಾಪುರಿಯಿಂದ(ಎಸ್‌ಸಿ) ರಾಜೇಶ್ ಲಿಲೋಥಿಯಾ, ಬಾಬರ್‌ಪುರದಿಂದ ಹಾಜಿ ಮೊಹಮ್ಮದ್ ಇಶ್ರಾಕ್ ಖಾನ್, ಡಿಯೋಲಿ(ಎಸ್‌ಸಿ)ಯಿಂದ ರಾಜೇಶ್ ಚೌವಾಣ್, ದೆಹಲಿ ಕಂಟೋನ್ಮೆಂಟ್‌ನಿಂದ ಪ್ರದೀಪ್ ಕುಮಾರ್ ಉಪಮನ್ಯು ಮತ್ತು ಲಕ್ಷ್ಮಿ ನಗರದಿಂದ ಸುಮಿತ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ.
ಈ ತಿಂಗಳ ಪ್ರಾರಂಭದಲ್ಲಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಒಟ್ಟು 47 ಅಭ್ಯರ್ಥಿಗಳನ್ನು ಇಲ್ಲಿಯವರೆಗೆ ಘೋಷಿಸಿದೆ.
PublicNext
25/12/2024 08:40 am