ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ರಕ್ಷಣೆಗೆ ಆಗ್ರಹಿಸಿ ಬುಧವಾರ "ಹಿಂದೂ ಹಿತರಕ್ಷಣಾ ಸಮಿತಿ"ಯಿಂದ ನಡೆದ ಪ್ರತಿಭಟನೆ ವೇಳೆ ನಗರದ ಕ್ಲಾಕ್ ಟವರ್ ಬಳಿ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಆಯೋಜಕರ ಮತ್ತು ಇತರರ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಹಿಂದೂ ಹಿತರಕ್ಷಣಾ ಸಮಿತಿ"ಯ ಆಯೋಜಕರ ಸೂಚನೆಯಂತೆ ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧದ ಮುಂಭಾಗ ಬೆಳಗ್ಗೆ 10-45 ಗಂಟೆ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಗೆ ಜನ ಜಮಾಯಿಸಿದ್ದರು. 11 ಗಂಟೆ ಸುಮಾರಿಗೆ ಬಳಿಕ ಪ್ರತಿಭಟನಾಕಾರರು ರಸ್ತೆ ತಡೆಯನ್ನುಂಟು ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ಪರಿಣಾಮ ಪ್ರತಿಭಟನಾ ಸ್ಥಳದ ಬಳಿ ವಾಹನಗಳ ಸಂಚಾರಕ್ಕೆ ಮತ್ತು ಜನ ಸಂಚಾರಕ್ಕೆ ತಡೆಯುಂಟಾಗಿರುತ್ತದೆ.
ಅಲ್ಲದೆ ಹಂಪನಕಟ್ಟೆಯಿಂದ ಆಗಮಿಸಿದ ಆ್ಯಂಬುಲೆನ್ಸ್ ವಾಹನದ ಸಂಚಾರಕ್ಕೆ ತಡೆಯುಂಟಾಗಿರುತ್ತದೆ. ಆಯೋಜಕರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘನೆ ಮಾಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗಿತ್ತು. ಇದರಿಂದ ರಸ್ತೆ ಸಂಚಾರಕ್ಕೆ ತಡೆಯುಂಟಾಗಿದ್ದು, ಈ ಬಗ್ಗೆ ಪ್ರತಿಭಟನಾ ಸಭೆಯ ಆಯೋಜಕರು ಮತ್ತು ಇತರರ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಅ.ಕ್ರ. 230/2024 ಕಲಂ: 126 (2), 270, 285, 292 BNS 2023 ಮತ್ತು ಕಲಂ 103 KP ACT ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
PublicNext
04/12/2024 09:58 pm