ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಕೆ ಬಂದಿದೆ. ನವೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ಅಕ್ರಮ್ ವಾಯ್ಕರ್ ಎಂಬ ಹೆಸರಿನಿಂದ ಬಂದಿರುವ ಇಮೇಲ್‌ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜ್ಪೆ ಠಾಣೆಗೆ ಸಿಐಎಸ್‌ಎಫ್ ಸಿಬ್ಬಂದಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ಸ್ ಕಿಂಗ್‌ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಸಿನಿಮಾ ನಿರ್ಮಾಪಕಿ ಕೃತಿಕಾ ಉದಯನಿಧಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್ಎಲ್ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಮುಂದಿಡಲಾಗಿದೆ.
ರಾಮೇಶ್ವರ ಕೆಫೆ ಸ್ಫೋಟವನ್ನು ಪಾಕ್ ಐಎಸ್‌ಐನವರು ತಮಿಳುನಾಡು ಡಿಜಿಪಿಯ ಪುತ್ರಿ ದೌಡಿ ಜೀವಾಲ್ ಎಂಬವರನ್ನು ಬಳಸಿಕೊಂಡು ಮಾಡಿದ್ದಾರೆ. ಜಮೇಶಾ ಮುಬೀನ್ ಎಂಬಾತ ಇದಕ್ಕೆ ಸಹಕಾರ ನೀಡಿದ್ದಾನೆ ಎಂದು ಇಮೇಲ್ ಸಂದೇಶದಲ್ಲಿ ಬರೆದಿರುವುದಲ್ಲದೆ, ವಿ.ಬಾಲಕೃಷ್ಣನ್ ಐಪಿಎಸ್, ವಕೀಲೆ ಶ್ವೇತಾ, ವರುಣ್ ಐಪಿಎಸ್ ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಮೇಶ್ವರ ಕೆಫೆ ಪ್ರಕರಣವನ್ನು ಐಎಸ್‌ಐನವರು ಮಾತ್ರ ಮಾಡಿದ್ದಾಗಿ ಹೇಳಲಾಗಿದೆ. ಹೀಗೆ ಹಲವು ವಿಚಾರಗಳನ್ನು ಅರೆಬರೆ ಇಂಗ್ಲಿಷ್‌ನಲ್ಲಿರುವ ಬೆದರಿಕೆ ಸಂದೇಶದಲ್ಲಿ ಬರೆಯಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ.
PublicNext
04/12/2024 04:56 pm