ಮಂಗಳೂರು: ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಗ್ರಾಮ ಪಂಚಾಯತಿ ಗ್ರಂಥಾಲಯ ಕಟ್ಟಡದೊಳಗೆ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು. ಕೊಲೆ ಶಂಕೆ ವ್ಯಕ್ತವಾಗಿದೆ.
ಸುಮಾರು 45 ವರ್ಷ ಪ್ರಾಯದ ಉತ್ತರ ಭಾರತ ಮೂಲದ ಅಪರಿಚಿತ ವ್ಯಕ್ತಿಯ ಮೃತದೇಹ ಇದಾಗಿದೆ. ತಲೆಗೆ ಕಲ್ಲು ಎತ್ತಿಹಾಕಿ ಅಥವಾ ಇನ್ನಿತರ ಸಲಕರಣೆಗಳಿಂದ ಹೊಡೆದು ಕೊಲೆಗೈದಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಅರ್ಧ ಕಂಬಳಿ ಹೊದಿಸಿ ಮಲಗಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸ್ವಲ್ಪ ದೂರದಲ್ಲಿ ಮೊಬೈಲ್ ಫೋನ್ ಕಂಡುಬಂದಿದ್ದು, ಅದರ ಸಿಮ್ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಲ್ದಾಣ ಬಳಿಯಿರುವ ಈ ನಿರ್ಮಾಣ ಹಂತದ ಕಟ್ಟಡ ಉಪ್ಪಿನಂಗಡಿ ಗ್ರಾಪಂಗೆ ಸೇರಿದ್ದಾಗಿದೆ. ಗ್ರಂಥಾಲಯ ನಿರ್ಮಾಣಕ್ಕಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮಳೆಯಿದ್ದ ಕಾರಣ ಸೋಮವಾರ, ಮಂಗಳವಾರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಕಾರ್ಮಿಕರು ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ತನಿಖೆ ಕೈಗೊಂಡಿದ್ದಾರೆ.
Kshetra Samachara
04/12/2024 10:03 pm