ಕೊಡಗು: ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆಯ ಪರವಾಗಿ ರಾಜ್ಯದಲ್ಲಿ ಯಾವ ಪಕ್ಷವೂ ಹೋರಾಟ ಮಾಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಂಚೂಣಿ ನಾಯಕ ನಾರಾಯಣ ಗೌಡ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಕುಶಾಲನಗರದ ಕಲಾಭವನದಲ್ಲಿ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡು, ನುಡಿ,ನೆಲ, ಜಲ, ಭಾಷೆಯ ಪರವಾಗಿ ಹೋರಾಟ ಮಾಡಿ ಯಾವುದೇ ಶಾಸಕರು, ರಾಜಕಾರಣಿಗಳು ಜೈಲುಪಾಲಾದ ಉದಾಹರಣೆಗಳಿಲ್ಲ. ಇತಿಹಾಸದಲ್ಲಿ ಸಾವಿರಾರು ಹೋರಾಟದ ಮೂಲಕ ಕರವೇ ರಾಜ್ಯದ ಗಡಿಪ್ರದೇಶಗಳಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಅಸ್ತಿತ್ವವನ್ನು ಉಳಿಸಿ, ಬೆಳೆಸಿದೆ. ಕಳೆದ 26 ವರ್ಷಗಳಿಂದ ಜೀವದ ಹಂಗು ತೊರೆದು ಕರವೇ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ, ಇಂದಿಗೂ ಹೋರಾಟ ಮಾಡುತ್ತಿದ್ದಾರೆ ಎಂದರು.
ರೈಲ್ವೇ ಇಲಾಖೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು, ಕನ್ನಡಿಗರಿಗೆ ಉದ್ಯೋಗಾವಕಾಶ ಒದಗಿಸಲು ಕರವೇ ಪ್ರಮುಖ ಪಾತ್ರ ವಹಿಸಿದೆ. ಕೊಡಗಿನ ಅಭಿವೃದ್ಧಿ ಪರವಾದ ಬೇಡಿಕೆಗಾಗಿ ಸ್ಥಳೀಯ ಘಟಕ ನಡೆಸುವ ಎಲ್ಲಾ ಹೋರಾಟಗಳಿಗೆ ಸಂಪೂರ್ಣ ಬೆಂಬಲ ಒದಗಿಸುವುದಾಗಿ ನಾರಾಯಣಗೌಡರು ತಿಳಿಸಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ, ಗೌರವಿಸಲಾಯಿತು.
PublicNext
04/12/2024 07:47 pm