ಉಡುಪಿ: ರಾಗ ತಪಸ್ವಿ, ಗಾನ ಯೋಗಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ತಿಮ್ಮಯ್ಯ ಹೆಗಡೆ (94) ನಿಧನರಾದರು. ಶಿರಸಿ ಸಮೀಪದ ಬಾಳೆಹದ್ದದಲ್ಲಿ ಜನಿಸಿದ ಕೃಷ್ಣ ಭಾಗವತರು ಏಳು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಪದ್ಯ ಹಾಡುತ್ತಾ ಹೊಸ ಹೊಸ ರಾಗಗಳನ್ನು ಅನ್ವೇಷಿಸುತ್ತಾ ಸಂಗೀತಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಹೊಸ್ತೋಟ ಮಂಜುನಾಥ ಭಾಗವತರೂ ಸೇರಿದಂತೆ ಆ ಕಾಲದ ಹಿರಿಯ ಕಲಾವಿದರೊಂದಿಗೆ ನಿಕಟ ಒಡನಾಟ ಹೊಂದಿದ್ದ ಅವರು ಯಕ್ಷಗಾನ ಪದ್ಯಗಳಿಗೆ ಹೊಸ ಹೊಸ ರಾಗಗಳನ್ನು ಸಂಯೋಜಿಸುತ್ತಾ ಪ್ರತೀ ವರ್ಷ ನೂರಾರು ತಾಳಮದ್ದಲೆಗಳಲ್ಲಿ ಭಾಗವಹಿಸುತ್ತಿದ್ದರು. ಎರಡು ವರ್ಷದ ಹಿಂದೆ ಭಾಗವತ ಸಂಗೀತಜ್ಞ ಪುತ್ರ ತಿಮ್ಮಪ್ಪ ಹೆಗಡೆಯನ್ನು ಕಳೆದುಕೊಂಡಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಇವರಿಗೆ, 2018ರಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Kshetra Samachara
03/12/2024 08:21 pm