ಕುಂದಾಪುರ: ಭಾನುವಾರ ಸ್ನಾನಕ್ಕೆಂದು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಗುಮ್ಮೊಲ ಸಮೀಪದ ಸೀತಾನದಿಯ ಒಳ್ಳೆ ಹೊಂಡ ಎಂಬಲ್ಲಿರುವ ವೆಂಟೆಡ್ ಡ್ಯಾಂ ನಲ್ಲಿ ನಡೆದಿದೆ.
ಬೆಳ್ವೆ ನಿವಾಸಿ ಶ್ರೀಧರ ಆಚಾರಿ ಎಂಬುವರ ಪುತ್ರ, ಹೆಬ್ರಿಯ ಎಸ್ಆರ್‌ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಶ್ರೀಶ ಆಚಾರಿ (13) ಹಾಗೂ ಸೂರ್ಗೋಳಿ ನಿವಾಸಿ ರಾಮ ನಾಯ್ಕ ಎಂಬುವರ ಮಗ ಜಯಂತ ನಾಯ್ಕ (19) ಈಜಲು ಹೋಗಿ ಸಾವನ್ನಪ್ಪಿದವರು.
ಒಟ್ಟು ನಾಲ್ಕು ಮಂದಿ ಬಾಲಕರು ರಜೆಯ ಹಿನ್ನೆಲೆಯಲ್ಲಿ ಬೆಳ್ವೆ ಸಮೀಪದ ಗೊಮ್ಮೋಲ ಚರ್ಚ್ ಹಿಂಭಾಗದಲ್ಲಿರುವ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಈಜಲು ಹೋಗಿದ್ದರು. ಈ ಪೈಕಿ ಶ್ರೀಶ ಹಾಗೂ ಜಯಂತ್ ನೀರಿನ ಆಳ ತಿಳಿಯದೆ ಮುಂದಕ್ಕೆ ಹೋಗಿದ್ದು, ಅಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇನ್ನುಳಿದ ಇಬ್ಬರು ಕೂಡಲೇ ಅಲ್ಲೇ ಹತ್ತಿರವಿದ್ದ ಲಕ್ಷ್ಮಣ ನಾಯ್ಕ ಅವರನ್ನು ಕರೆದಿದ್ದು, ಕೂಡಲೇ ಅಲ್ಲಿಗೆ ಬಂದ ಲಕ್ಷ್ಮಣ ನಾಯ್ಕ್, ನಾಗರಾಜ ನಾಯ್ಕರವರ ಸಹಾಯದಿಂದ ಅವರನ್ನು ದಡಕ್ಕೆ ಕರೆತಂದಿದ್ದಾರೆ. ಆದರೆ, ಅದಾಗಲೇ ಇಬ್ಬರೂ ಬಾಲಕರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಶಂಕರನಾರಾಯಣ ಠಾಣಾ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
01/12/2024 07:17 pm