ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಕ್ಷೀರಸಾಗರ ಸೊಸೈಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಎಟಿಎಂಗೆ ಹಣ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿಯಾಗಿದ್ದು ವಾಹನದಲ್ಲಿದ್ದ ಐವರ ಪೈಕಿ ಓರ್ವ ಗನ್ ಮ್ಯಾನ್ ಕೇರಳ ರಾಜ್ಯದ ನೀಲೇಶ್ವರ ನಿವಾಸಿ ರಾಕೇಶ್ (61) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳಿದಂತೆ ಮಂಗಳೂರು ನೀರ್ ಮಾರ್ಗದ ಪ್ರೇಮನಾಥ, ವಾಹನ ಚಾಲಕ ಮಾಣಿ ನಿವಾಸಿ ಜನಾರ್ದನ, ಮಂಗಳೂರು ನಿವಾಸಿ ವಿಶ್ವನಾಥ, ಮೂಡಬಿದ್ರೆ ನಿವಾಸಿ ಸುಶಾಂತ್ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ. ಎಟಿಎಂಗೆ ಹಣ ತುಂಬಿಸುವ ವಾಹನ ಮುಲ್ಕಿಯ ವಿಜಯ ಸನ್ನಿಧಿ ಬಳಿ ಎಟಿಎಂಗೆ ಹಣ ತುಂಬಿಸಿ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕ್ಷೀರಸಾಗರ ಸೊಸೈಟಿ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಬಳಿಕ ಹೆದ್ದಾರಿಯಲ್ಲಿ ಚಲಿಸಿ ಪಲ್ಟಿಯಾಗಿ ಬಿದ್ದಿದೆ.
ಈ ಸಂದರ್ಭ ವಾಹನದ ಒಳಗಡೆ ಚಾಲಕ ಸಹಿತ ಐವರು ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯ ದ್ವಿಚಕ್ರ ವಾಹನ ಮೆಕ್ಯಾನಿಕ್ ಸತೀಶ್ ಎಂಬುವರು ಸ್ಥಳಕ್ಕೆ ಧಾವಿಸಿ ವಾಹನದ ಡೋರ್ ತೆಗೆದು ಒಳಗಡೆ ಇದ್ದವರನ್ನು ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಟೋಲ್ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಹೆದ್ದಾರಿ ತಡೆಯನ್ನು ತೆರೆವುಗೊಳಿಸಿದ್ದಾರೆ. ಬಳಿಕ ಕ್ರೇನ್ ಮೂಲಕ ವಾಹನ ತೆರವುಗೊಳಿಸಲಾಯಿತು.
PublicNext
02/12/2024 07:29 pm