ಕಾರವಾರ: ಅಕ್ರಮ ವಲಸಿಗರಿಗೆ ಮತ್ತು ನುಸುಳುಕೋರರಿಗೆ ಆಧಾರ್ ಕಾರ್ಡ್ ದೊರಕದಂತೆ ನೋಂದಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಹೇಳಿದರು. ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಧಾರ್ ನೋಂದಣಿ ಮತ್ತು ನವೀಕರಣ ಕುರಿತಂತೆ ಮಾಸ್ಟರ್ ಟ್ರೈನರ್ ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿ ವಾಸ ಸ್ಥಳದ ವಿಳಾಸ, ಬ್ಯಾಕಿಂಗ್ ಸೇರಿದಂತೆ ದೈನಂದಿನ ಎಲ್ಲಾ ವ್ಯವಹಾರಗಳಿಗೆ ಬಳಸಲಾಗುತ್ತದೆ.
ಇದು ಅಕ್ರಮ ವಲಸಿಗರಿಗೆ ಮತ್ತು ನುಸುಳುಕೋರರಿಗೆ ದೊರೆತಲ್ಲಿ ಅತ್ಯಂತ ಅಪಾಯಕಾರಿಯಾಗಲಿದೆ. ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಆಧಾರ್ ನೋಂದಣಿ ಕೇಂದ್ರಗಳಿಗೆ ಬರುವವರ ಬಗ್ಗೆ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ 4 ಜನರ ಗುರುತು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಆಧಾರ್ ಸಹಕಾರಿಯಾಗಿದೆ. ಆಧಾರ್ ಕಾರ್ಡ್ನ ದುರುಪಯೋಗವಾಗದಂತೆ ತಡೆಯುವ ಮಹತ್ವ ಜವಾಬ್ದಾರಿ ಎಲ್ಲಾ ಆಧಾರ್ ನೋಂದಣಿ ಕೇಂದ್ರಗಳ ಮಾಸ್ಟರ್ ಟ್ರೈನರ್ ಗಳ ಮೇಲಿದ್ದು, ಆಧಾರ್ ನೋಂದಣಿ ಕೇಂದ್ರಗಳಿಗೆ ಆಗಮಿಸುವವರಿಂದ ಸಮರ್ಪಕ ದಾಖಲೆಗಳನ್ನು ಪಡೆದು, ಅವುಗಳ ನೈಜತೆಯನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರವೇ ಆಧಾರ್ ನೋಂದಣಿ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಕಾರವಾರ ಅಂಚೆ ವಿಭಾಗದ ಅಧೀಕ್ಷಕ ಧನಂಜಯ ಆಚಾರ್, ಬೆಂಗಳೂರಿನ ಆಧಾರ್ ನೋಂದಣಿ ಕಚೇರಿಯ ಉಪ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಹಾಗೂ ಇತರರು ಇದ್ದರು.
Kshetra Samachara
29/11/2024 07:57 pm