ಉಡುಪಿ: ಒಂದೂವರೆ ವರ್ಷದಿಂದ ಉಡುಪಿ ನಗರದಲ್ಲಿ ಮನ ಬಂದಂತೆ ತಿರುಗಾಡುತ್ತಾ, ಕೂಗುತ್ತಾ ಕೆಲವೊಂದು ಬಾರಿ ಭಯದ ವಾತಾವರಣ ಸೃಷ್ಟಿಸಿ, ಕ್ಷೌರ ಸ್ನಾನವನ್ನು ಮಾಡದೆ ಬೀದಿ ಪಾಲಾದ ಬಿಎಸ್ಸಿ ಪದವೀಧರನನ್ನು ರಕ್ಷಿಸಲಾಗಿದೆ.
ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಮಂಜೇಶ್ವರದ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ವ್ಯಕ್ತಿ ತನ್ನ ಹೆಸರು ಪ್ರಶಾಂತ್ ಸಾಲಿಯನ್ (40) ಮಲ್ಪೆ ಎಂಬ ಮಾಹಿತಿ ನೀಡಿದ್ದಾರೆ.
ಬಿಎಸ್ಸಿ ಪದವೀಧರರಾದ ಇವರು ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದು ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ಯಾವುದೋ ವಿಷಯಕ್ಕೆ ಮನನೊಂದು ಮಾನಸಿಕ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯದೆ ಬೀದಿ ಪಾಲಾಗಿ ಬದುಕು ನಡೆಸುತ್ತಿದ್ದರು.
ಬಹಳಷ್ಟು ಸಾರ್ವಜನಿಕರು ಕೂಡ ಇವರ ಬಗ್ಗೆ ಅನುಕಂಪ ಹೊಂದಿದ್ದರು. ಸಾರ್ವಜನಿಕರ ವಿನಂತಿಯ ಮೇರೆಗೆ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಮ್ಮ ವಾಹನದಲ್ಲಿ ಕರೆದೊಯ್ದು ಆಶ್ರಮಕ್ಕೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.
PublicNext
27/11/2024 01:25 pm