ಬೆಂಗಳೂರು : ಮಾಜಿ ಲವ್ವರ್ ಭೇಟಿಯಾಗಲು ಕರೆಸಿಕೊಂಡು ಅಪಹರಿಸಿ ಸುಲಿಗೆಗೈದಿದ್ದ ಯುವತಿ ಸಹಿತ 7 ಜನ ಆರೋಪಿಗಳನ್ನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಪೋತುಲ ಶಿವ ಎಂಬಾತನನ್ನ ಅಪಹರಿಸಿ ಸುಲಿಗೆಗೈದಿದ್ದ ಆರೋಪದಡಿ ಮೋನಿಕಾ, ಹರೀಶ್, ಹರಿಕೃಷ್ಣ, ರಾಜ್ಕುಮಾರ್, ನರೇಶ್, ಅಂಜನೀಲ್, ನರಸಿಂಹ ಎಂಬುವವರನ್ನ ಬಂಧಿಸಲಾಗಿದೆ.
ಅಪಹರಣಕ್ಕೊಳಗಾಗಿದ್ದ ಶಿವ ಆಂಧ್ರಪ್ರದೇಶದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ.ದೂರದ ಸಂಬಂಧಿಯಾಗಿದ್ದ ಮೋನಿಕಾ 4 ವರ್ಷಗಳಿಂದ ಶಿವನಿಗೆ ಸ್ನೇಹಿತೆಯಾಗಿದ್ದಳು.ಭೇಟಿಯಾಗೋಣ ಬಾ ಎಂದಿದ್ದ ಮೋನಿಕಾ, ನವೆಂಬರ್ 17ರಂದು ಶಿವನನ್ನ ಪೆನುಗೊಂಡಕ್ಕೆ ಕರೆಸಿದ್ದಳು.ಆದರೆ ಶಿವನನ್ನ ಸುಲಿಗೆಗೈಯ್ಯಲು ಸಜ್ಜಾಗಿದ್ದ ಆರೋಪಿಗಳು ಆತನ ಮೇಲೆ ಹಲ್ಲೆಗೈದು ಪಾವಗಡಕ್ಕೆ ಕರೆದೊಯ್ದಿದ್ದರು.
ಬಳಿಕ 3 ದಿನಗಳ ಕಾಲ ಹೋಟೆಲ್ನಲ್ಲಿರಿಸಿಕೊಂಡು ಆತನ ಬಳಿಯಿದ್ದ ಚಿನ್ನದ ಸರ, ಬ್ರಾಸ್ಲೆಟ್ ಕಿತ್ತುಕೊಂಡು ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಂತರ ಆರೋಪಿಗಳು ಬೆದರಿಸಿದಾಗ ಸ್ನೇಹಿತರಿಗೆ ಕರೆ ಮಾಡಿದ್ದ ಶಿವ 5 ಲಕ್ಷ ರೂಗಳನ್ನ ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಆದರೆ ಹಣ ವಿತ್ ಡ್ರಾ ಮಾಡಲು ಅಗತ್ಯವಿರುವ ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್ಗಳನ್ನ ಶಿವ ಮನೆಯಲ್ಲಿಟ್ಟು ಬಂದಿದ್ದ. ಶಿವನಿಂದಲೇ ಆತನ ಮನೆಯವರಿಗೆ ಕರೆ ಮಾಡಿಸಿದ್ದ ಆರೋಪಿಗಳು ಬೆಂಗಳೂರಿನ ಮೆಜೆಸ್ಟಿಕ್ಗೆ ಆತನ ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್ಗಳನ್ನ ತರಿಸಿಕೊಂಡಿದ್ದರು.
ಹಣ ವಿತ್ ಡ್ರಾ ಮಾಡುವಾಗ ಪೊಲೀಸರ ಎಂಟ್ರಿ...!
ನವೆಂಬರ್ 21ರಂದು ಹಣ ವಿತ್ ಡ್ರಾ ಮಾಡಿಸಲು ಶಿವನೊಂದಿಗೆ ಮೂರು ಜನ ಆರೋಪಿಗಳು ಕೋರಮಂಗಲದ ಫೋರಂ ಮಾಲ್ ಜಂಕ್ಷನ್ ಬಳಿಯಿರುವ ಎಟಿಎಂ ಬಳಿ ಕರೆತಂದಿದ್ದರು. ಆ ಸಂದರ್ಭದಲ್ಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರು ಆರೋಪಿಗಳು ಪರಸ್ಪರ ಜಗಳವಾಡಲಾರಂಭಿಸಿದ್ದರು. ಅದೇ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಕೋರಮಂಗಲ ಪೊಲೀಸರ ತಂಡ ಅನುಮಾನಗೊಂಡು ಆರೋಪಿತರನ್ನ ವಶಕ್ಕೆ ಪಡೆದು ಠಾಣೆಗೆ ಕರೆತಂದಿತ್ತು.
ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಅಪಹರಣ ಮಾಡಿ ಹಣ ಸುಲಿಗೆ ಮಾಡುತ್ತಿರುವುದು ಬಯಲಾಗಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು ಪಾವಗಡಲ್ಲಿದ್ದ ನಾಲ್ವರ ಸಹಿತ ಒಟ್ಟು 7 ಜನ ಆರೋಪಿತರನ್ನ ಬಂಧಿಸಿದ್ದಾರೆ.
ಆರೋಪಿ ಮೋನಿಕಾ ಹಾಗೂ ಆಕೆಯ ಪ್ರಿಯಕರ ಅಂಜನಿಲ್ ಸೇರಿ ಶಿವನ ಅಪಹರಣದ ಸಂಚು ರೂಪಿಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಓರ್ವ ಆರೋಪಿತನ ವಿರುದ್ಧ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಸಹ ತಿಳಿದು ಬಂದಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
PublicNext
24/11/2024 05:18 pm