ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸ್ತಿದ್ದ 35 ವರ್ಷದ ಜೀವಾ ಎನ್ನುವ ಯುವತಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಬನಶಂಕರಿ ಠಾಣೆ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನಲ್ಲಿರುವ ಮನೆಯಲ್ಲಿ ಶುಕ್ರವಾರ ಜೀವಾ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವತಿ ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾಳೆ. ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಕಿರುಕುಳ ನೀಡಿದ್ದಾರೆ ಎಂದು ಮೃತಳ ಸಹೋದರಿ ಸಂಗೀತಾ ಆರೋಪಿಸಿದ್ದಾರೆ.
ನವಂಬರ್ 14 ರಿಂದ 23 ವರೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ತನಿಖೆ ನಡೆಸಲು ನ್ಯಾಯಾಲಯದಿಂದ ಸೂಚಿಸಲಾಗಿತ್ತು.ಆದರೆ 14ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಡಿವೈಎಸ್ಪಿ ಕನಕಲಕ್ಷ್ಮಿ ಸೂಚಿಸಿದ್ದರು. ವಿಚಾರಣೆಗೆ ಹಾಜರಾಗಿದ್ದ ಜೀವಾಳ ಒಳ ಉಡುಪುಗಳನ್ನು ವಿವಸ್ತ್ರಗೊಳಿಸಿ, 'ಸೈನೇಡ್ ತಂದಿದ್ದೀರಾ?' ಎಂದು ಪ್ರಶ್ನಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ.
'ನೀವೆಲ್ಲಾ ಯಾಕೆ ಬುದುಕಿದ್ದೀರಾ? ನೀನು ಮತ್ತು ನಿನ್ನ ತಂಗಿ ದುಡ್ಡು ಹೇಗೆ ಸಂಪಾದಿಸುತ್ತಿದ್ದಿರಾ?' ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ದಾಖಲಾತಿಗಳನ್ನ ಒದಗಿಸಿದರೂ ಸಹ ನನಗೆ ಅದು ಬೇಡ, 25 ಲಕ್ಷ ಹಣ ಕೊಡು. ಇಲ್ಲವಾದರೆ ನೀವೆಲ್ಲಾ ಯಾಕೆ ಬದುಕಬೇಕು, ಹೋಗಿ ಸಾಯಿ' ಎಂದು ನಿಂದಿಸಿದ್ದಾರೆ. ಅಂಗಡಿ ಪರಿಶೀಲಿಸಿ ಎಲ್ಲರ ಮುಂದೆ ಅವಮಾನ ಮಾಡಿದ್ದಾರೆ ಎಂದು ಜೀವಾ ಬರೆದಿದ್ದ 13 ಪುಟಗಳ ಡೆತ್ ನೋಟ್ ಆಧರಿಸಿ ಸಂಗೀತಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಜೀವಾಳ ಸಹೋದರಿಯ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಭೋವಿ ಅಭಿವೃದ್ಧಿ ನಿಗಮದ ಅಕ್ರಮದ ಕುರಿತು ಸಿಐಡಿ ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶಿಸಿತ್ತು. ಅದರಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು.
PublicNext
23/11/2024 02:03 pm