ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಜನರಿಗೆ ವರವಾಗಬೇಕಿದ್ದ ಪ್ಲೈಓವರ್, ಆದರೆ ಕಾಮಗಾರಿ ಸ್ಥಗಿತಗೊಂಡು ಒಂದಿಲ್ಲೊಂದು ಅವ್ಯವಸ್ಥೆ ನಿರ್ಮಾಣವಾಗುತ್ತಲೇ ಇದೆ. ನಗರದ ಮಧ್ಯ ಭಾಗದಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಮೇಲು ಸೇತುವೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಎರಡೂವರೆ ತಿಂಗಳು ಕಳೆದರೂ ಇನ್ನೂ ಪುನರಾರಂಭವಾಗುತ್ತಿಲ್ಲ. ಕಾಮಗಾರಿಗೆ ಬಳಸಿದ ಕಬ್ಬಿಣದ ಸರಳುಗಳು, ರಾಡ್‌ಗಳು ತುಕ್ಕು ಹಿಡಿಯುತ್ತಿದೆ. ಹೀಗಿದ್ದರೂ ಕಾಮಗಾರಿ ಆರಂಭವಾಗುವ ಲಕ್ಷಣ ಕಂಡು ಬರುತ್ತಿಲ್ಲ.
ಸೆಪ್ಟೆಂಬರ್ 10ರಂದು ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‌ಐ ನಾಬಿರಾಜ ಅವರ ತಲೆಮೇಲೆ ಹಳೇಕೋರ್ಟ್ ವೃತ್ತದ ಬಳಿ ಕಬ್ಬಿಣದ ರಾಡ್ ಬಿದ್ದು, ಮೃತಪಟ್ಟಿದ್ದರು. ಅಂದಿನಿಂದ ಕಾಮಗಾರಿ ಸ್ಥಗಿತವಾಗಿದೆ. ಗುತ್ತಿಗೆ ಪಡೆದ ಕಂಪನಿ ಹಾಗೂ ಅದರ 19 ಸಿಬ್ಬಂದಿ/ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಕಾರ್ಮಿಕರ ಕೊರತೆ ಎದುರಾಗಿದೆ ಎಂದು ಒಂದೆಡೆ ಜಿಲ್ಲಾಡಳಿತ ಹೇಳುತ್ತಿದ್ದರೆ, ಕಾಮಗಾರಿ ಸ್ಥಗಿತವಾಗಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ಥವಾಗಿದೆ ಎಂದು ಸಾರ್ವಜನಿಕರು ಮತ್ತೊಂದೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹದಿನೈದು ದಿನಗಳ ಹಿಂದೆ ಗುತ್ತಿಗೆ ಪಡೆದ ಕಂಪನಿ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ ಅಧಿಕಾರಿ ಜೊತೆ ಸಭೆ ನಡೆಸಿ, ನಾಲ್ಕು ದಿನದ ಒಳಗೆ ಕಾಮಗಾರಿ ಪುನರಾರಂಭಿಸುವಂತೆ ಸೂಚಿಸಿದ್ದರು. ಜಿಲ್ಲಾಡಳಿತ ಪ್ರತಿವಾರವೂ ಎನ್‌ಎಚ್‌ಎಐ ಹಾಗೂ ಲೋಕೋಪಯೋಗಿ ಇಲಾಖೆ ಜೊತೆ ಸಭೆ ನಡೆಸಿ, ಗುತ್ತಿಗೆ ಪಡೆದ ಕಂಪನಿಗೆ ತಕ್ಷಣ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲು ಹೇಳುತ್ತಲೇ ಇದೆ. ಆದರೂ, ಅರ್ಧಕ್ಕೆ ನಿಂತ ಕಾಮಗಾರಿ ಮುಂದುವರಿಯುತ್ತಿಲ್ಲ.
ಕಬ್ಬಿಣದ ರಾಡ್, ಆ್ಯಂಗಲ್ ಪಟ್ಟಿಗಳೆಲ್ಲ ತುಕ್ಕು ಹಿಡಿಯುತ್ತಿದ್ದು, ಬಾಳಿಕೆ ಅವಧಿ ಸಹ ಕಡಿಮೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾಣವಾಗಿದೆ. ಈಗಾಗಲೇ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಮನವಿ ಸಲ್ಲಿಸಿದರೂ ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ.
Kshetra Samachara
22/11/2024 04:22 pm