ಇಂಫಾಲ : ಮಣಿಪುರ ರಾಜ್ಯದ ಜಿರಿಬಾಮ್ ಜಿಲ್ಲೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಆರು ನಾಗರಿಕರನ್ನು ಉಗ್ರಗಾಮಿಗಳು ಅಪಹರಣ ಮಾಡಿ ಒತ್ತೆಯಾಳುಗಳನ್ನಾಗಿ ಇಟ್ಟ ಬಳಿಕ ಅವರ ಪೈಕಿ ಮೂವರ ಶವಗಳು ಪತ್ತೆಯಾಗಿದೆ. ಇದೀಗ ಮೂವರ ಹತ್ಯೆಯ ನ್ಯಾಯಕ್ಕಾಗಿ ಶನಿವಾರ ಇಂಫಾಲದಲ್ಲಿ ಭಾರೀ ಪ್ರತಿಭಟನೆ ನಡೆದಿದೆ.
ರಾಜ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಕನಿಷ್ಠ ಇಬ್ಬರು ಮಣಿಪುರ ಸಚಿವರು ಮತ್ತು ಮೂವರು ಶಾಸಕರ ಮನೆಗಳಿಗೆ ನುಗ್ಗಿ ದಾಳಿ ಮಾಡಿದ್ದಾರೆ. ಶಾಸಕರ ಮನೆಗಳ ಮೇಲೆ ಗುಂಪು ದಾಳಿ ಮಾಡಿದ ಹಿನ್ನೆಲೆ ಇಂಫಾಲ್ ಪಶ್ಚಿಮ ಆಡಳಿತ ಜಿಲ್ಲೆಯಲ್ಲಿ ಅನಿರ್ದಿಷ್ಟ ಅವಧಿಯ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಇಂಫಾಲ್ ಪಶ್ಚಿಮ, ಪೂರ್ವ, ಬಿಷ್ಣುಪುರ್, ತೌಬಲ್, ಕಾಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಎರಡು ದಿನಗಳ ಕಾಲ ಅಧಿಕಾರಿಗಳು ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ಲ್ಯಾಂಫೆಲ್ ಸನಕೀತೆಲ್ ಪ್ರದೇಶದಲ್ಲಿರುವ ನಿವಾಸಕ್ಕೆ ಗುಂಪೊಂದು ನುಗ್ಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್‌ಬಂದ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಳಿಯ ಆರ್‌ಕೆ ಇಮೊ ಅವರ ನಿವಾಸದ ಮುಂದೆ ಜಮಾಯಿಸಿದ್ದಾರೆ.
ಇನ್ನು ಕೇಶಾಮ್‌ಥಾಂಗ್ ಕ್ಷೇತ್ರದ ಸ್ವತಂತ್ರ ಶಾಸಕ ಸಪಂ ನಿಶಿಕಾಂತ ಸಿಂಗ್ ಅವರನ್ನು ಟಿಡ್ಡಿಮ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲು ಬಂದಿದ್ದ ಪ್ರತಿಭಟನಾಕಾರರು, ಶಾಸಕರು ರಾಜ್ಯದಲ್ಲಿ ಇಲ್ಲ ಎಂದು ತಿಳಿಸಿದ ನಂತರ ಅವರ ಒಡೆತನದ ಸ್ಥಳೀಯ ಪತ್ರಿಕೆಯ ಕಚೇರಿ ಕಟ್ಟಡಕ್ಕೆ ನುಗ್ಗಿ ಧ್ವಂಸಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
16/11/2024 07:14 pm