ಬೆಂಗಳೂರು: ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇದೇ 21 ಅಥವಾ 22ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು. ಅಲ್ಲದೇ, ಅಹವಾಲು ಸ್ವೀಕಾರ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.
ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಣೆಗೆ ಒಳಗಾದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರನ್ನು ಬೆಳಿಗ್ಗೆಯಿಂದ ಸಂಜೆತನಕ ವೇದಿಕೆಗೆ ಬರಮಾಡಿಕೊಂಡು ಅಹವಾಲು ಸ್ವೀಕರಿಸುತ್ತೇವೆ. ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡುತ್ತೇವೆ ಎಂದು ತಿಳಿಸಿದರು.
3 ತಂಡಗಳನ್ನು ರಾಜ್ಯಾಧ್ಯಕ್ಷರು ಈಗಾಗಲೇ ಪ್ರಕಟಿಸಿದ್ದಾರೆ. ವಿಜಯೇಂದ್ರರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಇನ್ನೆರಡು ತಂಡಗಳು ಕಾರ್ಯನಿರ್ವಹಿಸುತ್ತವೆ. ಆ ತಂಡಗಳು ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳ ಪ್ರವಾಸ ಮಾಡಲಿದೆ. ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ನೈಜ ವರದಿಯನ್ನು ತರಲಿದ್ದೇವೆ ಎಂದು ವಿವರಿಸಿದರು.ಕೇಂದ್ರದ 3 ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿಯವರು ಸೇರಿ ಪ್ರಮುಖ ನಾಯಕರು ಇರುವ ಪ್ರತಿ ತಂಡವು ಕನಿಷ್ಠ 8-10 ಜಿಲ್ಲೆಗಳನ್ನು ಪ್ರವಾಸ ಮಾಡಲಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸದನದಲ್ಲಿ ವಾಸ್ತವಿಕ ಸಮಸ್ಯೆಗಳ ಕಡೆ ಬೆಳಕು ಚೆಲ್ಲುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಡಿಸೆಂಬರ್ ಮೊದಲ ವಾರದಿಂದ ಈ ತಂಡಗಳು ಪ್ರವಾಸ ಮಾಡಲಿದೆ ಎಂದು ಮಾಹಿತಿ ನೀಡಿದರು.
PublicNext
16/11/2024 05:48 pm