ಮಲ್ಪೆ: ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ಪರಿಸರ ಸಾಂಕ್ರಾಮಿಕ ರೋಗದ ತಾಣವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.ಒಂದೆಡೆ ಇಲ್ಲಿಯ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದರೆ ,ಈ ಪರಿಸರದ ಚರಂಡಿ ಅವ್ಯವಸ್ಥೆ ಸ್ಥಳೀಯರಿಗೆ ನಿತ್ಯ ನರಕದ ದರ್ಶನ ಮಾಡಿಸುತ್ತಿದೆ.
ಬೀಚ್ ಗೆ ಹೋಗುವ ವಾಹನಗಳು ,ಕಾಲೇಜಿಗೆ ಹೋಗುವ ವಾಹನಗಳ ಜೊತೆ ಘನ ವಾಹನಗಳ ಸಂಚಾರ ಇಲ್ಲಿ ಹೆಚ್ಚಿರುತ್ತದೆ. ಕಾಲೇಜು ಪ್ರಾರಂಭವಾಗುವ ಸಮಯ ಮತ್ತು ಬಿಡುವ ಸಮಯದಲ್ಲಿ ವಾಹನ ಮತ್ತು ಜನದಟ್ಟಣೆ ಇರುತ್ತದೆ.ಮೊದಲೇ ಮಳೆಗೆ ರಸ್ತೆ ಹದಗೆಟ್ಟಿದೆ. ಇದೂ ಸಾಲದೆಂಬಂತೆ ಮೀನುಗಾರಿಕೆ ವಾಹನಗಳ ಸಂಚಾರ ಇಲ್ಲಿ ಹೆಚ್ಚಿರುವುದರಿಂದ ಮೀನಿನ ನೀರು ಮತ್ತು ಎಣ್ಣೆ ರಸ್ತೆಯಲ್ಲೇ ಚೆಲ್ಲುತ್ತಿರುತ್ತದೆ.ಮಳೆಯ ಜೊತೆಗೆ ಈ ಮೀನಿನ ನೀರು ಮತ್ತು ಎಣ್ಣೆ ಸೇರಿ ರಸ್ತೆ ಸಂಪೂರ್ಣ ಗಬ್ಬೆದ್ದು ಹೋಗಿದೆ.
ಇದು ಒಂದು ಕಡೆಯಾದರೆ ಎಲ್ಲೆಂದರಲ್ಲಿ ಗಲೀಜು ನೀರು ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ. ತೆರೆದ ಬಯಲಲ್ಲೇ ಗಲೀಜು ನೀರು ನಿಂತಿರುವುದು ಒಂದೆಡೆಯಾದರೆ , ಮಳೆನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲಿಲ್ಲ. ನಿತ್ಯ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿ ಅತಿ ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ.
ಸಂಬಂಧಪಟ್ಟವರು ತಕ್ಷಣ ಇತ್ತ ಕಡೆ ಗಮನ ಹರಿಸಬೇಕು. ರಸ್ತೆ ರಿಪೇರಿ ಜೊತೆಗೆ ಅಗತ್ಯ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಹಲವು ಸಮಯದಿಂದ ಇರುವ ಈ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
Kshetra Samachara
15/11/2024 01:46 pm