ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರು ನಡೆಸಿದ್ದರೂ ಎನ್ನಲಾದ ಹನಿಟ್ರ್ಯಾಪ್ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದ ಆರೋಪದಡಿ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು ಸಿಐಡಿಯ ಎಸ್‌ಐಟಿ ಪೊಲೀಸರು ಗುರುವಾರ ಬಂಧಿಸಿ, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಐಯಣ್ಣ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಡಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಷರತ್ತುಬದ್ಧ ಜಾಮೀನಿನ ಮೇಲೆ ಮುನಿರತ್ನ ಅವರು ಬಿಡುಗಡೆ ಆಗಿದ್ದಾರೆ.
ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ, ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆಯನ್ನು ಸರ್ಕಾರವು ಎಸ್‌ಐಟಿ ವಹಿಸಿತ್ತು.
ಐಯಣ್ಣ ರೆಡ್ಡಿ ಅವರು ಕಬ್ಬನ್‌ಪಾರ್ಕ್, ರಾಜಗೋಪಾಲನಗರ, ಯಶವಂತಪುರ, ಪೀಣ್ಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಹೆಚ್ಚಿನ ವರ್ಷ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ಆರೋಪಿಗಳು ನಡೆಸುತ್ತಿದ್ದ ಹನಿಟ್ರ್ಯಾಪ್‌ಗೆ ಇನ್ಸ್ಪೆಕ್ಟರ್ ನೆರವು ನೀಡಿದ್ದರು. ಅಲ್ಲದೇ ಆರೋಪಿಗಳು ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು, ಗೊತ್ತಿದ್ದರೂ ಇನ್‌ಸ್ಪೆಕ್ಟರ್ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪದ ಅಡಿ ಬಂಧಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
PublicNext
15/11/2024 07:47 am