ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಟ್ರಂಪ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕ(DNI)ನ್ನು ಆಯ್ಕೆ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮಾಜಿ ಸದಸ್ಯೆ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರನ್ನು ಡಿಎನ್‌ಐ ಆಗಿ ಆಯ್ಕೆ ಮಾಡಿದ್ದಾರೆ.
ಹೌದು ಅಮೆರಿಕ ಕಾಂಗ್ರೆಸ್‌ನ ಮಾಜಿ ಸದಸ್ಯೆ ಮತ್ತು ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಸಿದ್ದಾರೆ. ಗಬ್ಬಾರ್ಡ್ ಅವರನ್ನು "ಹೆಮ್ಮೆಯ ರಿಪಬ್ಲಿಕನ್" ಎಂದು ಬಣ್ಣಿಸಿರುವ ಅವರು, ಗುಪ್ತಚರ ಸಮುದಾಯಕ್ಕೆ ಅವರ "ನಿರ್ಭೀತ ಚೇತನ" ನೆರವಾಗಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರು ತಮ್ಮ ಅಧಿಕೃತ ಪ್ರಚಾರ ಖಾತೆ ಟ್ರಂಪ್ ವಾರ್ ರೂಮ್ ಮೂಲಕ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದಾರೆ.
"ಅಮೆರಿಕ ಕಾಂಗ್ರೆಸ್‌ನ ಮಾಜಿ ಸದಸ್ಯೆ, ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ದೇಶದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರನ್ನಾಗಿ ನೇಮಕ ಮಾಡಲು ಅತೀವ ಸಂತಸವಾಗುತ್ತಿದೆ. ಎರಡು ದಶಕಗಳಿಗೂ ಅಧಿಕ ಕಾಲದಿಂದ ತುಳಸಿ ನಮ್ಮ ದೇಶಕ್ಕಾಗಿ ಮತ್ತು ಅಮೆರಿಕನ್ನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನದ ಸ್ಪರ್ಧೆಯ ನಾಮನಿರ್ದೇಶನಕ್ಕೆ ಅವರು ಎರಡೂ ಪಕ್ಷಗಳಲ್ಲಿ ವಿಸ್ತೃತ ಬೆಂಬಲ ಹೊಂದಿದರು.
ಇದೀಗ ಅವರು ಹೆಮ್ಮೆಯ ರಿಪಬ್ಲಿಕನ್!. ತುಳಸಿಯವರ ವರ್ಣರಂಜಿತ ವೃತ್ತಿ ಬದುಕಿನ ನಿರ್ಭೀತ ಚೇತನವನ್ನು ಅವರು ನಮ್ಮ ಗುಪ್ತಚರ ಸಮುದಾಯಕ್ಕೆ ತರಲಿದ್ದಾರೆ ಎನ್ನುವ ಖಾತರಿ ನನಗಿದೆ. ನಮ್ಮ ಸಂವಿಧಾನಾತ್ಮಕ ಹಕ್ಕುಗಳ ಚಾಂಪಿಯನ್ ಆಗಿ ದೃಢತೆಯ ಮೂಲಕ ಶಾಂತಿಯನ್ನು ಸಾಧಿಸಲಿದ್ದಾರೆ. ತುಳಸಿ ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಲಿದ್ದಾರೆ" ಎಂದು ಬಣ್ಣಿಸಿದ್ದಾರೆ.
2013 ರಿಂದ 2021ರವರೆಗೆ ಇವರು ಹವಾಯಿ 2ನೇ ಕಾಂಗ್ರೆಸ್ಸಿಯಲ್ ಜಿಲ್ಲೆಯ ಡೆಮಾಕ್ರಟಿಕ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. 2022ರಲ್ಲಿ ಡೆಮಾಕ್ರಟಿಕ್ ಪಕ್ಷ ತೊರೆದಿದ್ದರು. ತಮ್ಮ ನಿರ್ಗಮನಕ್ಕೆ ಯುದ್ಧ ಮತ್ತು ಮಿಲಿಟರಿ ಹಸ್ತಕ್ಷೇಪ ಬಗೆಗಿನ ಭಿನ್ನಾಭಿಪ್ರಾಯವನ್ನು ಕಾರಣವಾಗಿ ನೀಡಿದ್ದರು ಹಾಗೂ ಪಕ್ಷವನ್ನು ಯುದ್ಧಪಿಪಾಸುಗಳ ಸಾಧನ ಎಂದು ಬಣ್ಣಿಸಿದ್ದರು.
ಡೆಮಾಕ್ರಟಿಕ್ ಅಧ್ಯಕ್ಷೀಯ ಹುದ್ದೆಯ ರೇಸ್‌ಗೆ 2019ರಲ್ಲಿ ಪ್ರಯತ್ನ ನಡೆಸಿದ್ದು, ಕಮಲಾ ಹ್ಯಾರಿಸ್ ಅವರಂಥ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿಯಾಗಿದ್ದರು. ಇದೀಗ ಹಿಂದೂ ಮಹಿಳೆಗೆ ಉನ್ನತ ಹುದ್ದೆಯೊಂದು ದೊರೆತಂತಾಗಿದೆ.
PublicNext
14/11/2024 06:46 pm