ಉಡುಪಿ: ಕರಾವಳಿಯಲ್ಲಿ ಭತ್ತದ ತೆನೆ ಕಟಾವಿಗೆ ಸಿದ್ಧವಾಗಿದೆ. ಹಿಂಗಾರು ಮಳೆಯ ಭೀತಿ ರೈತರನ್ನು ಆತಂಕಕ್ಕೀಡು ಮಾಡಿದೆ. ತಮಿಳುನಾಡಿನಿಂದ ಕಟಾವಿಗೆ ಯಂತ್ರಗಳು ಬಂದಿವೆ. ಬಾಯಿಗೆ ಬಂದ ದರ ನಿಗದಿ ಮಾಡಿ ರೈತರನ್ನು ಸುಲಿಗೆ ಮಾಡಲಾಗುತ್ತಿವೆ. ಪ್ರತಿ ಗಂಟೆಗೆ 1800 ರೂ. ಗೆ ಸರಕಾರ ಬೆಲೆ ನಿಗದಿ ಪಡಿಸಿದೆ. ಆದರೆ, ಪ್ರತಿ ಗಂಟೆಗೆ ಎರಡೂವರೆಯಿಂದ 3000 ರೂಪಾಯಿ ಬಾಡಿಗೆ ಪಡೆಯಲಾಗುತ್ತಿದೆ. ಭತ್ತದ ತೆನೆಯ ಜೊತೆ ರೈತರ ತಲೆಯನ್ನು ಕೂಡ ಬೋಳಿಸಲಾಗುತ್ತಿದೆ.
ಅಂದಹಾಗೆ ಈ ವರ್ಷ ಉತ್ತಮ ಮಳೆಯಿಂದ ಉತ್ತಮ ಬೆಳೆಯಾಗಿದೆ. ಹೀಗಿದ್ದರೂ ರೈತರಿಗೆ ಖುಷಿ ಇಲ್ಲ. ಭತ್ತದ ತೆನೆ ಕಟಾವಿಗೆ ಯಂತ್ರಗಳು ಅನಿವಾರ್ಯ ಎಂಬ ಸ್ಥಿತಿ ಇದೆ. ಆದರೆ, ಸರ್ಕಾರ ಯಂತ್ರಗಳ ವ್ಯವಸ್ಥೆಯನ್ನು ಇನ್ನೂ ಮಾಡಿಲ್ಲ ಎಂಬ ನೋವು ಕೃಷಿಕರಿಗಿದೆ. ಉಡುಪಿ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲೇ ಕಟಾವು ಪ್ರಾರಂಭವಾದರೆ, ರಾಜ್ಯದ ಬೇರೆಡೆ ಡಿಸೆಂಬರ್, ಜನವರಿಯಲ್ಲಿ ಕಟಾವು ಪ್ರಾರಂಭವಾಗುತ್ತದೆ. ಇನ್ನು ಕರಾವಳಿಯ ಕೃಷಿಕರಿಗೆ ಯಂತ್ರಧಾರೆ ಯೋಜನೆಯ ಪ್ರಯೋಜನವೂ ಸಿಕ್ಕಿಲ್ಲ. ಸರ್ಕಾರದಿಂದ 1800 ರೂಪಾಯಿ ದರ ನಿಗದಿಯಾಗಿದ್ದರೂ ರೈತರು ದುಬಾರಿ ಬಾಡಿಗೆ ತೆರಬೇಕಾಗಿದೆ.
ಈ ಕುರಿತು ಮಾತನಾಡಿರುವ ಕೃಷಿಕ ಮುಖಂಡ ರವೀಂದ್ರ ಗುಜ್ಜರಬೆಟ್ಟು , ಕಟಾವು ಯಂತ್ರಗಳದ್ದೇ ಕರಾವಳಿಯ ಪ್ರಮುಖ ಸಮಸ್ಯೆ. ಅವರು ಹೇಳುವ ಹಣ ಕೊಟ್ಟು ಕಟಾವು ಮಾಡಿಸಬೇಕಾಗಿದೆ. ಸರಕಾರ ಬಯಲುಸೀಮೆಯ ಕೃಷಿ ನಿಯಮಾವಳಿಗಳನ್ನು ಕರಾವಳಿಗೆ ಅನ್ವಯ ಮಾಡಿ ನೋಡುತ್ತದೆ. ಇದೇ ಬಹುದೊಡ್ಡ ಸಮಸ್ಯೆ. ಕರಾವಳಿಯ ಹವಾಗುಣಕ್ಕೆ ಅನುಗುಣವಾಗಿ ಇಲ್ಲಿಯ ಸಮಸ್ಯೆಯನ್ನು ಅರಿತು ಸರಕಾರ ಯೋಜನೆ ರೂಪಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಯಾವುದೇ ಯೋಜನೆಯೂ ಕರಾವಳಿಗರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುತ್ತದೆ ಎಂದು ಹೇಳಿದ್ದಾರೆ.
ವರದಿ: ರಹೀಂ ಉಜಿರೆ
PublicNext
14/11/2024 07:20 pm