ಮಂಗಳೂರು: ನಗರದ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಸುವುದನ್ನು ಪ್ರಶ್ನಿಸಿ ಪೇಟಾ ಸಲ್ಲಿಸಿರುವ ಅರ್ಜಿ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಾಣಿ ಸಂಗ್ರಹಾಲಯದ ಬಳಿ ಸ್ಪರ್ಧೆ ನಡೆಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ. ಇದೇ ಕಂಬಳವನ್ನು ಬೇರೆ ಸ್ಥಳದಲ್ಲಿ ಆಯೋಜಿಸಲು ಆಕ್ಷೇಪವಿಲ್ಲ ಎಂದು ಪೇಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ನೋಟಿಸ್ ಜಾರಿಗೊಳಿಸಿದೆ.
ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಎಜಿ ಕೆ. ಶಶಿಕಿರಣ್ ಶೆಟ್ಟಿ, ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಅರ್ಜಿದಾರರಿಗೆ ತಕರಾರಿಲ್ಲ. ಪ್ರಾಣಿ ಸಂಗ್ರಹಾಲಯದ ಬಳಿ ಕಂಬಳ ಸ್ಪರ್ಧೆ ನಡೆಸಿದರೆ ಪ್ರಾಣಿಗಳು ತೊಂದರೆ ಅನುಭವಿಸಲಿದೆ ಎನ್ನವುದು ಅರ್ಜಿದಾರರ ವಾದ. ಈ ಬಗ್ಗೆ ಪ್ರಾಣಿಗಳಿಗೆ ತೊಂದರೆಯಾಗುತ್ತದೆಯೇ ಎಂದು ಕಂಡುಕೊಳ್ಳಲು ತಾಂತ್ರಿಕ ಅಧ್ಯಯನಕ್ಕಾಗಿ ನಾಲ್ವರು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ಪ್ರತಿವಾದಿ ಮಾಡಿದ್ದು ಅವರಿಗೂ ನೋಟಿಸ್ ಜಾರಿಗೊಳಿಸಬೇಕು ಎಂದಿದ್ದರು. ಅದರಂತೆ ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ಪ್ರಾಧಿಕಾರಕ್ಕೆ ನೋಟಿಸ್ ಮಾಡಿದ್ದು ಡಿ.4ಕ್ಕೆ ವಿಚಾರಣೆ ಮುಂದೂಡಿದೆ.
Kshetra Samachara
21/11/2024 05:55 pm