ಮಂಗಳೂರು: ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ನಿರ್ಮಾಣ ಕಾಮಗಾರಿಗಳ ಉತ್ಪಾದನಾ ಸಂಸ್ಥೆ ಇಟಲಿ ಮೂಲದ ಮೀರ್ ಗ್ರೂಪ್‌ನೊಂದಿಗೆ ಮಂಗಳೂರಿನ ಎಸ್‌ಇಝಡ್ ಕಂಪೆನಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.
ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಉಪಸ್ಥಿತಿಯಲ್ಲಿ ಎಸ್‌ಇಝಡ್ ಸಿಇಒ ಸೂರ್ಯನಾರಾಯಣ ಹಾಗೂ ಇಟಲಿಯ ಮಿರ್ ಗ್ರೂಪ್ ಸಿಇಒ ರಫೇಲೆ ಮರಾಝೊ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದನ್ವಯ ಮೀರ್ ಗ್ರೂಪ್ ಮಂಗಳೂರಿನಲ್ಲಿ 10 ಎಕರೆ ಪ್ರದೇಶದಲ್ಲಿ 1,500 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಜೊತೆಗೆ 500ರಿಂದ 600 ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶದ ನಿರೀಕ್ಷೆಯಿದೆ.
ಲೋಕಸಭಾ ಚುನಾವಣೆ ವೇಳೆ ಸಂಸದ ಬ್ರಿಜೇಶ್ ಚೌಟ ಘೋಷಿಸಿರುವ ‘ಬ್ಯಾಕ್ ಟೂ ಊರು’ ಪರಿಕಲ್ಪನೆಯಡಿ ಆರಂಭವಾದ ಮೊದಲ ಯೋಜನೆಯಾಗಿದೆ. ಮಂಗಳೂರು ಮೂಲದ ನಿತಿಕ್ ರತ್ನಾಕರ್ ಮೀರ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ವಿದೇಶದಲ್ಲಿದ್ದರೂ ನಿತಿಕ್ ತಾಯ್ನಾಡಿನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಮೀರ್ ಗ್ರೂಪ್‌ಗೆ ಕಂಪೆನಿಗೆ ಇಟಲಿ ಮಾದರಿಯಲ್ಲಿ ಮಂಗಳೂರನ್ನು ಹಸಿರು ಇಂಧನದ ಕೇಂದ್ರವಾಗಿ ಮಾಡುವ ಗುರಿಯಿದೆ. ಕಂಪೆನಿ ಕಲ್ಲು, ಇಟ್ಟಿಗೆಯ ಗೋಡೆಗಳಿಗೆ ಪರ್ಯಾಯವಾಗಿ ಸೋಲಾರ್ ಪ್ಯಾನೆಲ್ ಸಹಿತವಾದ ವಿದ್ಯುತ್ ಉತ್ಪಾದಿಸುವಂತಹ ಗೋಡೆಗಳನ್ನು ಸಿದ್ಧಪಡಿಸುತ್ತದೆ. ಈ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಕಾರ್ಬನ್ ನೆಗೆಟಿವ್ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಇಟಲಿ ಮಾದರಿಯ ಕಟ್ಟಡಗಳ ರೂಫ್, ಗೋಡೆಗಳಲ್ಲಿಯೇ ವಿದ್ಯುತ್ ಉತ್ಪಾದನೆ ಮಾಡುವ ಪರಿಕಲ್ಪನೆಯನ್ನು ಭಾರತಕ್ಕೆ ತರುವ ಪ್ರಯತ್ನ ಇದಾಗಿದೆ. ಜನರಿಗೆ ಬೇಕಾದಂತೆ ಕಾಂಕ್ರೀಟ್, ಗ್ರಾನೆಟ್ ರೂಪದಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಲಾಗುತ್ತದೆ. ಈ ಮೂಲಕ 5 ಸ್ಕ್ವ್ಯಾರ್ ಮೀಟರ್ 1 ಕಿಲೋ ವ್ಯಾಟ್ ವಿದ್ಯುತ್ ತಯಾರಿಸಬಹುದು. ಸುಮಾರು 2 ವರ್ಷದಲ್ಲಿ ಮೀರ್ ಗ್ರೂಪ್‌ನ ಪರಿಸರ ಸ್ನೇಹಿ ಕೈಗಾರಿಕೆ ಮಂಗಳೂರಿನಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.
PublicNext
23/11/2024 01:01 pm