ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಸಂಪುಟ ಪುನಾರಚನೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಹಿಂದೆಯೂ ಕೆಲ ಆಕಾಂಕ್ಷಿಗಳು ಸಂಪುಟ ಸೇರ್ಪಡೆಗೆ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಕಸರತ್ತು ನಡೆಸಿದ್ದರು. ಹೈಕಮಾಂಡ್ ಸಹ ಉಪಚುನಾವಣೆ ಮುಗಿಯಲಿ ಎಂದು ಸಬೂಬು ಹೇಳಿ ಕಳಿಸಿತ್ತು.
ಇದೀಗ ಉಪಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಸಂಪುಟ ಪುನಾರಚನೆ ಚರ್ಚೆ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೆ ಉಪಚುನಾವಣೆಯ ಫಲಿತಾಂಶದ ಬಳಿಕ ಅಂದ್ರೆ ಬೆಳಗಾವಿ ಅಧಿವೇಶನ ಆರಂಭದೊಳಗೆ ಸಂಪುಟ ಪುನಾರಚನೆಯಾಗಲಿದೆ ಅಂತಿದ್ದಾರೆ.
ಕೆಲ ಸಚಿವರ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪಗಳು ಮತ್ತು ಅವರ ಕಾರ್ಯವೈಖರಿಯನ್ನ ಗಮನಿಸಿ ೫ ಕ್ಕೂ ಹೆಚ್ಚು ಸಚಿವರ ಬದಲಾವಣೆಯಾಗಲಿದೆ ಎಂಬ ಚರ್ಚೆ ಪಕ್ಷದ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.
ಆದ್ರಲ್ಲಿ ಅಬಕಾರಿ ಸಚಿವರಾದ ಆರ್‌ಬಿ ತಿಮ್ಮಾಪುರ, ಶಿಕ್ಷಣ ಸಚಿವ ಮಧುಬಂಗಾರಪ್ಪ, ಸಣ್ಣ ನೀರಾವರಿ ಸಚಿವ ಬೋಸರಾಜು, ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಸೇರಿದಂತೆ ಇನ್ನೂ ಕೆಲ ಸಚಿವರ ಹೆಸರು ಕೇಳಿ ಬರ್ತಿದೆ ಆದ್ರೆ ಇದೇ ಸಚಿವರು ಬದಲಾವಣೆ ಆಗ್ತಾರೆ ಅನ್ನೋ ಸ್ಪಷ್ಟತೆಯಾರಲ್ಲೂ ಇಲ್ಲ, ಆದ್ರೆ ಪಕ್ಷದ ಪಡಸಾಲೆಯಲ್ಲಿ ಮಾತ್ರ ಇವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರ್ತಿದೆ.
ಹಳಬರಿಗೆ ಕೋಕ್ ಕೊಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಗೆ ಹೈಕಮಾಂಡ್ ಸ್ಪಂದಿಸಲಿದ್ಯಾ ಅನ್ನೋದು ಸಧ್ಯದ ಪ್ರಶ್ನೆಯಾಗಿದೆ. ಇನ್ನೊಂದೆಡೆ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿ. ನಾಗೇಂದ್ರ ಮತ್ತೆ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ನಾಗೇಂದ್ರರನ್ನ ಮತ್ತೆ ಸಂಪುಟ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಒಟ್ಟಾರೆ ಉಪಚುನಾವಣೆ ಫಲಿತಾಂಶ ಬಳಿಕ ಸಂಪುಟದಲ್ಲಿ ಮೇಜರ್ ಸರ್ಜರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
PublicNext
13/11/2024 05:12 pm