ಮಂಗಳೂರು: ಕಡಲತಡಿ ಮಂಗಳೂರಿನಲ್ಲಿ ಲಕ್ಕಿಗೇಮ್ ಸ್ಕೀಮ್ ಹಾವಳಿ ವಿಪರೀತವಾಗಿದೆ. ತಿಂಗಳಿಗೊಂದು ಕಾರು, ತಿಂಗಳಿಗೊಂದು ಐಫೋನ್, ಫ್ಲ್ಯಾಟ್, ಚಿನ್ನ, ಬೈಕ್ ಎಂದು ನಾನಾ ಆಮಿಷಗಳನ್ನು ನೀಡಿ ದಿನಕ್ಕೊಂದು ಲಕ್ಕಿಗೇಮ್ ಸ್ಕೀಮ್, ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಆದರೆ ಇವುಗಳು ನಿಜವಾಗಿಯೂ ಕಾನೂನು ಬದ್ಧವಾಗಿದೆಯೇ? ನಂಬಿಕೆಗೆ ಅರ್ಹವೇ? ಅನ್ನೋದೆ ಡೌಟ್..
ತಿಂಗಳಿಗೆ ಸಾವಿರ ರೂಪಾಯಿ ಕಟ್ಟಿದರೆ ಸಾಕು. ಮನೆ ಗೆಲ್ಲುವ ಅವಕಾಶ.. ಜೊತೆಗೆ ಪ್ರತಿ ತಿಂಗಳು ಲಕ್ಕಿ ಡ್ರಾ ಮೂಲಕ ಲಕ್ಷಾಂತರ ಮೌಲ್ಯದ ವಸ್ತುಗಳು.. ಹೀಗೆ ವೆರೈಟಿ ಆಮಿಷಗಳನ್ನು ಜನರ ಮುಂದಿಟ್ಟು ಹಣ ಸಂಗ್ರಹ ಮಾಡುವ ಲಕ್ಕಿ ಗೇಮ್ ಸ್ಕೀಮ್‌ಗಳು ಕಡಲೂರು ಮಂಗಳೂರಿನಲ್ಲಿ ಹೆಚ್ಚಾಗಿದೆ. ನೀವು ಕಟ್ಟಿದ ಹಣಕ್ಕೆ ಯಾವುದಾದರೂ ವಸ್ತು ಕೊನೆಗೆ ಸಿಗುತ್ತದೆಂದು ಜನರಿಗೆ ಆಸೆ ಹುಟ್ಟಿಸಿ ಲಕ್ಕಿ ಗೇಮ್ ಸ್ಕೀಮ್‌ಗಳನ್ನು ಮುಂದಿಡುತ್ತಿದ್ದಾರೆ.
ರಾಜ್ಯದಲ್ಲಿ ಲಾಟರಿ ನಿಷೇಧವಿದ್ರೂ ಇಂತಹ ಲಕ್ಕಿಗೇಮ್ ಸ್ಕೀಮ್‌ಗಳಿಗೆ ಕಡಿವಾಣವಿಲ್ಲ. ಎಗ್ಗಿಲ್ಲದೇ ನಡೆಯುತ್ತಿದೆ. ಸ್ಕೀಮ್‌ಗಳ ಮೂಲಕ ಆರ್‌ಬಿಐ ನಿಯಮಗಳನ್ನೂ ಗಾಳಿಗೆ ತೂರಿ ಜನರಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇಂತಹ ಗೇಮ್‌ಗಳಲ್ಲಿ ಜನ ಕಟ್ಟಿದ ಹಣಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಜನ ವಿಶ್ವಾಸದ ಮೇಲೆ ಜನ ಆಸೆಯಿಂದ ಸೇರುತ್ತಾರೆ ಅಷ್ಟೇ. ಆದ್ರೆ ನಂತರ ಗೇಮ್ ನಡೆಸಿದಾತ ಪಂಗನಾಮ ಹಾಕಿ ಓಡಿ ಹೋದ್ರೆ ಕೇಳೋರೆ ಇಲ್ಲದಂತಾಗುತ್ತೆ ಅಷ್ಟೇ. ಆದಾಯ ಅಧಿಕಾರಿಗಳ ಮೌನವಹಿಸಿದ್ದು, ಇದರ ತೆರಿಗೆಗಳ ಬಗ್ಗೆ ಜನರಿಗೆ ಅನುಮಾನವಿದೆ. ಆದ್ದರಿಂದ ಕಷ್ಟಪಟ್ಟು ದುಡಿಯುವ ಬಡ ಜನರಿಗೆ ಪಂಗನಾಮ ಹಾಕುವ ಸ್ಕೀಮ್‌ಗಳ ಮೇಲೆ ಐಟಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
PublicNext
13/11/2024 09:35 am