ಚಿಕ್ಕಮಗಳೂರು: ಸರ್ಕಾರದ ಯೋಜನೆಗಳಾದ ಸುಕನ್ಯಾ ಸಮೃದ್ಧಿ, ಮಾತೃ ವಂದನಾ ಯೋಜನೆಗಳ ಸೌಲಭ್ಯವನ್ನು ಅಲ್ಪಸಂಖ್ಯಾತರಿಗೆ ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಜುಲೈ-2024 ರಿಂದ ಸೆಪ್ಟೆಂಬರ್-2024 ರವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಹೆಣ್ಣು ಮಕ್ಕಳ ಯೋಗಕ್ಷೇಮವನ್ನು ಖಚಿತ ಪಡಿಸಲು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೆರವಾಗಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಸೌಲಭ್ಯವನ್ನು ಅಲ್ಪಸಂಖ್ಯಾತರ ಮಕ್ಕಳು ಸಹ ಪಡೆಯಬೇಕು. ಅವರ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ತುಂಬಾ ಉಪಯುಕ್ತವಾದದ್ದು, ಅಧಿಕಾರಿಗಳು ಈ ಯೋಜನೆಗಳಿಗೆ ಸಂಬಂಧಪಟ್ಟ ಫಲಾನುಭವಿ ಮಕ್ಕಳ ಪೋಷಕರಿಗೆ ಅರ್ಜಿ ಸಲ್ಲಿಸುವಂತೆ ಅರಿವು ಮೂಡಿಸಿ ಕ್ರಮವಹಿಸಬೇಕು ಎಂದರು.
ಮಾತೃವಂದನಾ ಯೋಜನೆಯು ಅಲ್ಪಸಂಖ್ಯಾತರ ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗೆ ನೆರವಾಗುವುದೇ ಯೋಜನೆಯ ಉದ್ದೇಶವಾಗಿದೆ. ಪ್ರತಿ ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಸೌಲಭ್ಯ ದೊರೆಯುವಂತೆ ಜಾಗೃತೆವಹಿಸಬೇಕು. ಅಲ್ಪಸಂಖ್ಯಾತರ ಮಕ್ಕಳಿಗೆ ಕಡ್ಡಾಯವಾಗಿ ವಿದ್ಯಾರ್ಥಿವೇತನ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಶಾಲೆಯಿಂದ ಹೊರಬಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಅವರನ್ನು ಶಾಲೆಗೆ ದಾಖಲಾಗುವಂತೆ ಶಿಕ್ಷಕರು ನಿಗವಹಿಸಿಬೇಕು. ಶಾಲೆಗಳ ಕಟ್ಟಡಗಳ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ದಾಖಲಾಗುವಂತೆ ಮತ್ತು ನಿಲಯಗಳ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಹೆಚ್ಚು ಮಕ್ಕಳು ನಿಲಯಗಳಲ್ಲಿ ದಾಖಲಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
Kshetra Samachara
11/11/2024 08:14 pm