ಧಾರವಾಡ: ರೈತರ ಪಹಣಿ ಪತ್ರಿಕೆಯಲ್ಲಿ ನಮೂದಾಗಿದ್ದ ಸದರಿ ಆಸ್ತಿ ವಕ್ಫ ಆಸ್ತಿಗೆ ಒಳಪಟ್ಟಿದೆ ಎಂಬ ಶಬ್ದದ ವಿರುದ್ಧ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು.
ತಮ್ಮ ಪಿತ್ರಾರ್ಜಿತ ಆಸ್ತಿಗೆ ವಕ್ಫ ಏನು ಸಂಬಂಧ? ತಮ್ಮ ಪಹಣಿ ಪತ್ರಿಕೆಯಲ್ಲಿ ಸದರಿ ಆಸ್ತಿ ವಕ್ಫಗೆ ಒಳಪಟ್ಟಿದೆ ಎಂದು ನಮೂದಾಗಿದ್ದು ಏಕೆ? ಇದನ್ನು ನಮೂದು ಮಾಡಿದವರು ಯಾರು? ರೈತರ ಗಮನಕ್ಕೆ ತರದೇ ಪಹಣಿಯಲ್ಲಿ ವಕ್ಫ ಹೆಸರು ಸೇರಿಸುವುದು ಏಕೆ? ಎಂದು ಉಪ್ಪಿನ ಬೆಟಗೇರಿ ಗ್ರಾಮಸ್ಥರು ಕೆಲ ದಿನಗಳ ಹಿಂದಷ್ಟೇ ಧಾರವಾಡ ತಹಶೀಲ್ದಾರ್ ಕಚೇರಿ ಎದುರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಿದ್ದರು.
ಅಲ್ಲದೇ ಸೋಮವಾರವೂ ಉಪ್ಪಿನ ಬೆಟಗೇರಿ ಗ್ರಾಮಸ್ಥರು ಧಾರವಾಡದ ವಕ್ಫ ಕಚೇರಿ ಎದುರೇ ಹೋರಾಟ ನಡೆಸಿದ್ದರು. ಉಪ್ಪಿನ ಬೆಟಗೇರಿಯ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬುವವರಿಗೆ ಸೇರಿದ ಆಸ್ತಿಯ ಪಹಣಿಯಲ್ಲಿ ವಕ್ಫ ಆಸ್ತಿ ಎಂದು ನಮೂದಾಗಿತ್ತು. ಈ ಕುರಿತು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ನಂತರ ನ.5 ರಂದು ವಕ್ಫ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂಬ ಭರವಸೆಯನ್ನು ತಹಶೀಲ್ದಾರರು ನೀಡಿದ್ದರು.
ಆ ಪ್ರಕಾರ ಇಂದು ಸಭೆ ನಡೆಸಿದ ತಹಶೀಲ್ದಾರರು ಎಲ್ಲಿ ತಪ್ಪು ನಡೆದಿದೆಯೋ ಅದನ್ನು ಸರಿಪಡಿಸಬೇಕು. ಇನ್ನೆರಡು ದಿನದಲ್ಲಿ ರೈತರ ಪಹಣಿ ಪತ್ರಿಕೆಯಲ್ಲಿ ದಾಖಲಾಗಿರುವ ವಕ್ಫ ಎಂಬ ಹೆಸರನ್ನು ತೆಗೆದು ಹಾಕಬೇಕು ಎಂದು ತಹಶೀಲ್ದಾರರು ಕೋರ್ಟ್ ಮೂಲಕ ಆದೇಶಿಸಿದ್ದಾರೆ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಇದೇ ವಿಷಯವಾಗಿ ಸಾಕಷ್ಟು ಬಾರಿ ತಹಶೀಲ್ದಾರ ಕಚೇರಿಗೆ ಅಲೆದಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೋರಾಟ ನಡೆಸಿದಾಗ ಮಾಧ್ಯಮವರು ಇದರ ಮೇಲೆ ದೊಡ್ಡಮಟ್ಟದಲ್ಲೇ ಬೆಳಕು ಚೆಲ್ಲಿದಾಗ ಈಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದಾರೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.
ಇಂದು ನಡೆದ ಸಭೆಯಲ್ಲಿ ಕೇವಲ ಉಪ್ಪಿನ ಬೆಟಗೇರಿ ಗ್ರಾಮಸ್ಥರ ಸಮಸ್ಯೆಯನ್ನು ಮಾತ್ರ ಬಗೆಹರಿಸಲು ಕ್ರಮ ವಹಿಸಲಾಗಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲೂ ಇದೇ ರೀತಿ ಆಗಿದ್ದು, ಆ ಬಗ್ಗೆ ತಹಶೀಲ್ದಾರರು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಉಪ್ಪಿನ ಬೆಟಗೇರಿ ಗ್ರಾಮಸ್ಥರು ತಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲದಿಂದಾಗಿ ತಹಶೀಲ್ದಾರ ಕಚೇರಿ ಎದುರೇ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/11/2024 07:27 pm