ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮನೆಯೊಳಗೆ ಏಕಾಏಕಿ ಬಂದು ಅಡಗಿ ಕುಳಿತ ಚಿರತೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಮುಲ್ಕಿ: ಮುಲ್ಕಿಯ ಅಕ್ಕಸಾಲಿಕರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬುವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ನುಗ್ಗಿದ್ದ ಚಿರತೆಯನ್ನು ಮೂಡಬಿದ್ರೆ ವಲಯದ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಸಕಾಲಿಕ ಕಾರ್ಯಾಚರಣೆಯಿಂದ ಬೋನ್ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ.

ಶನಿವಾರ ರಾತ್ರಿ 9:30 ಸುಮಾರಿಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆಯು ಮನೆಗೆ ನುಗ್ಗಿದ್ದಾಗ ನಾಯಿ ಬೊಗಳಲು ಶುರು ಮಾಡಿದೆ. ಈ ವೇಳೆ ಸದಾನಂದ ಕೋಟ್ಯಾನ್ ಚಿರತೆ ನೋಡಿ ಕಂಗಾಲಾಗಿದ್ದಾರೆ. ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಮುಂದಾಗಿ ಅಡುಗೆಮನೆಯ ಎದುರು ಬಾಗಿಲಿಗೆ ಮುಂದಾಗಿ ಬೋನ್ ಅಳವಡಿಸಿ ಸುಮಾರು ಹೊತ್ತು ಕಳೆದರೂ ಚಿರತೆಯ ಪತ್ತೆ ಇರಲಿಲ್ಲ. ಈ ನಡುವೆ ಚಿರತೆಯನ್ನು ನೋಡಲು ಕುತೂಹಲಿಗರ ದಂಡು ನೆರೆದಿದ್ದು ಅವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿ ಪರಿಣಮಿತ್ತು.

ಬಳಿಕ ಮಧ್ಯರಾತ್ರಿ ಸುಮಾರು 2:30 ಗಂಟೆಗೆ ಚಿರತೆ ಬೋನ್ ಒಳಗೆ ಬಿದ್ದು ಸೆರೆಯಾಗಿದ್ದು ಸ್ಥಳೀಯರು ನಿಟ್ಟುಸಿರುಪಡುವಂತಾಯಿತು. ಕಾರ್ಯಾಚರಣೆಯಲ್ಲಿ ಮುಲ್ಕಿ ನಗರ ಪಂಚಾಯತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಬಾಲಚಂದ್ರ ಕಾಮತ್, ಸುಭಾಷ್ ಶೆಟ್ಟಿ, ಸ್ಥಳೀಯರಾದ ಅಶ್ವತ್ ಮಟ್ಟು, ಅರಣ್ಯ ಇಲಾಖೆ ಅಧಿಕಾರಿಗಳಾದ ಮಂಜುನಾಥ, ನಾಗೇಶ್ ಬಿಲ್ಲವ, ಬೀಟ್ ಫಾರೆಸ್ಟ್ ನ ಶಂಕರ, ಚಂದ್ರಶೇಖರ್, ಮಿಥುನ್, ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರಮಿಸಿದರು.

ಮುಲ್ಕಿ ಆಸುಪಾಸಿನಲ್ಲಿ ಇನ್ನಷ್ಟು ಚಿರತೆಗಳು ಇರುವ ಸಾಧ್ಯತೆಯಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಭಾಸ್ಕರ್ ಕಾಂಚನ್ ಒತ್ತಾಯಿಸಿದ್ದಾರೆ.

Edited By : Ashok M
PublicNext

PublicNext

20/10/2024 09:47 am

Cinque Terre

36.93 K

Cinque Terre

0

ಸಂಬಂಧಿತ ಸುದ್ದಿ