ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೆಂಕುತಿಟ್ಟುವಿನ ಅಗ್ರಗಣ್ಯ ಪಾರಂಪರಿಕ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅದಕ್ಕಾಗಿ ನಿನ್ನೆ ರವಿವಾರ ಬೆಳಗ್ಗೆ ಬೆಂಗಳೂರಿನ ಆರ್ ಕೆ ಭಟ್ಟರ ಮನೆಯಲ್ಲಿ ಉಳಿದಿದ್ದ ಅವರಿಗೆ ಸೋಮವಾರ ಮುಂಜಾನೆ 4ಗಂಟೆ ಸುಮಾರಿಗೆ ತೀವ್ರತರವಾದ ಹೃದಯನೋವು ಉಂಟಾಗಿದೆ. ಅವರೊಂದಿಗಿದ್ದ ಕಲಾವಿದರು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರವನ್ನು ಆರ್.ಕೆ ಭಟ್ಟರ ಮನೆಗೆ ತಂದು ಅಂತಿಮ ದರ್ಶನಕ್ಕಿರಿಸಿ ಬಳಿಕ ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆತರಲಾಗುತ್ತದೆ ಎಂದು ಜೊತೆಗಿದ್ದ ಕಲಾವಿದರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 2.30ಗಂಟೆ ಸುಮಾರಿಗೆ ಬಂಟ್ವಾಳ ಬೈಪಾಸ್‌ನಲ್ಲಿರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ‌. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸದಾ ಅಧ್ಯಯನಶೀಲನಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಬಂಟ್ವಾಳ ಜಯರಾಮ ಆಚಾರ್ಯರು ಪ್ರಸ್ತುತ ಹನುಮಗಿರಿ ಮೇಳದ ಕಲಾವಿದರಾಗಿದ್ದರು. ಸರಳ, ಸಜ್ಜನ, ನಿಗರ್ವಿ, ವಿನಯವಂತ ಹಾಸ್ಯಗಾರರಾದ ಆಚಾರ್ಯರು ಎಳವೆಯಿಂದಲೇ ಯಕ್ಷಗಾನ ಆಸಕ್ತರಾಗಿ ತಮ್ಮ ತಂದೆಯವರೊಂದಿಗೆ ಅಮ್ಟಾಡಿ, ಸೊರ್ನಾಡು ಮೇಳದಲ್ಲಿ ವೇಷ ಮಾಡಿದ್ದರು. ಕಟೀಲು ಸುಂಕದಕಟ್ಟೆ ಮೇಳಗಳಲ್ಲಿ 4ವರ್ಷಗಳ ಕಾಲ ತಿರುಗಾಟ ನಡೆಸಿದ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನ ನಾಟ್ಯ ಕಲಿತರು. ಅದೇ ವರ್ಷ ಮತ್ತೆ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು‌.

ಅಲ್ಲಿ ನಾಲ್ಕು ವರ್ಷಗಳ ಕಾಲ ತಿರುಗಾಟ ನಡೆಸಿದ ಅವರು ಪುತ್ತೂರು ಮೇಳಕ್ಕೆ ಸೇರಿದರು‌‌. ಒಂದು ವರ್ಷದ ಬಳಿಕ ಮತ್ತೆ ಕಟೀಲು ಮೇಳ ಸೇರಿದರು. ಬಳಿಕ ಕದ್ರಿ ಮೇಳ ಸೇರ್ಪಡೆಗೊಂಡು ತುಳುಪ್ರಸಂಗದಲ್ಲಿ ವೈವಿಧ್ಯಮಯ ಹಾಸ್ಯವನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಬಳಿಕ ಸುರತ್ಕಲ್ ಮೇಳ, ಎಡನೀರು ಮೇಳ ಸೇರಿದ ಇವರು ಹೊಸನಗರ ಮೇಳದಲ್ಲಿ 9ವರ್ಷ ಸೇವೆ ಸಲ್ಲಿಸಿ ಸದ್ಯ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿ ಸುಮಾರು 50ವರ್ಷಗಳ ಕಲಾಸೇವೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

21/10/2024 10:31 am

Cinque Terre

23.06 K

Cinque Terre

1

ಸಂಬಂಧಿತ ಸುದ್ದಿ