ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಫರ್ಝಾನ 14 ವರ್ಷಗಳ 'ವನವಾಸ' ಅಂತ್ಯ- ತಾಯಿ, ಮಗ ಒಂದಾದ ಭಾವುಕ ಕ್ಷಣ

ಮಂಗಳೂರು: ಪುಟ್ಟಪುಟ್ಟ ಮಕ್ಕಳಿದ್ದಾಗ ಮಾನಸಿಕ ಅಸ್ವಸ್ಥಳಾಗಿ ಬೀದಿಪಾಲಾದ ತಾಯಿ. ಯಾರದೋ ಕೈಗೂಸಾಗಿ ಬೆಳೆದ ಮಕ್ಕಳು ಬೆಳೆದು ಅವರಿಗೇ ಮದುವೆಯಾಗಿ ಮಕ್ಕಳಾಗಿದೆ. ತಾಯಿಗೆ ಮುದಿತನ ಆವರಿಸಿದೆ. ವಿಧಿಲೀಲೆ ವಿಚಿತ್ರ ಅಲ್ವೇ... ಕೊನೆಗೂ ತಾಯಿ-ಮಕ್ಕಳು ಒಂದಾಗಿಯೇ ಬಿಟ್ಟರು! ಹೌದು... ಈ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ವೈಟ್ ಡೌಸ್ ಸಂಸ್ಥೆ.

2009ರಲ್ಲಿ ಮಂಗಳೂರಿನ ಹೊಯ್ಗೆಬಝಾರ್‌‌ನಲ್ಲಿ ದಿಕ್ಕುದೆಸೆಯಿಲ್ಲದೆ ಕಾಣ ಸಿಕ್ಕ ಫರ್ಝಾನಗೆ ವೈಟ್‌ಡೌಸ್‌ ಸಂಸ್ಥೆ ಆಶ್ರಯ ನೀಡಿತ್ತು. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಆಕೆ ಇಲ್ಲಿಗೆ ಬಂದು 14 ವರ್ಷಗಳೇ ಕಳೆಯಿತು. ಇತ್ತೀಚೆಗೆ ಮದ್ದೂರಿನ ಓರ್ವರ ಮೂಲಕ ಫರ್ಝಾನ ಪುತ್ರ ಆಸೀಫ್‌ಗೆ ವೈಟ್‌ಡೌಸ್ ಸಂಸ್ಥೆಯಲ್ಲಿ ತನ್ನ ತಾಯಿ ಇರುವುದು ತಿಳಿಯಿತು. ಆಕೆಯನ್ನು ಪುತ್ರ, ಸೊಸೆ ಬಂದು ಮನೆಗೆ ಕರೆದೊಯ್ದಿದ್ದಾರೆ.

ಈ ಫರ್ಝಾನ ಉದ್ಯಮಿಯ ಕೈಹಿಡಿದ ಹೆಣ್ಣುಮಗಳು. ಪತಿಗೆ ಅವರ ಸಹೋದರನೊಂದಿಗೆ ಪಾಲುದಾರಿಕೆಯಲ್ಲಿ ಬ್ಯುಸಿನೆಸ್ ಇತ್ತು. ಎಲ್ಲವೂ ಚೆನ್ನಾಗಿತ್ತು. ಆದರೆ, ವಿಧಿಲಿಖಿತ ಬೇರೆಯೇ ಇತ್ತು. ಬ್ಯುಸಿನೆಸ್, ಆಸ್ತಿಯ ಆಸೆಗೆ ಸಂಬಂಧಿಕರು ಆಕೆಯ ಪತಿಗೆ ಕುಡಿತದ ಚಟ ಹತ್ತಿಸಿ, ಫರ್ಝಾನಗೆ ಸದಾ ಹೊಡೆದು ಬಡಿದು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು.

ಅಲ್ಲದೆ, 3 ತಿಂಗಳ ಹಸಿ ಬಾಣಂತಿಯನ್ನೇ ಮಾನಸಿಕವಾಗಿ ಕುಗ್ಗಿಸಿ ಬೀದಿಪಾಲು ಮಾಡಿದರು. ಪತಿಯೂ ಮದ್ಯವ್ಯಸನಿಯಾಗಿ ಇಹಲೋಕ ತ್ಯಜಿಸಿದರು. ತಾಯಿ-ತಂದೆಯಿಲ್ಲದ 3 ತಿಂಗಳ ಹೆಣ್ಣುಮಗು ಹಾಗೂ 3 ವರ್ಷದ ಗಂಡು ಮಗು ಯಾರದ್ದೋ ಮನೆಯಲ್ಲಿ ಬೆಳೆದರು. ಸದ್ಯ ಇಬ್ಬರಿಗೂ ಮದುವೆಯಾಗಿ ಇಬ್ಬಿಬ್ಬರು ಮಕ್ಕಳಿದ್ದಾರೆ.

14 ವರ್ಷಗಳ ಬಳಿಕ ಪುತ್ರನ ಗುರುತು ಹಿಡಿಯದ ಫರ್ಝಾನ, ತನ್ನ 3 ವರ್ಷದ ಮೊಮ್ಮಗನನ್ನೇ ಪುತ್ರನೆಂದೇ ಅಂದುಕೊಂಡು ಸದಾ ತನ್ನ ಹತ್ತಿರ ಎಳೆದುಕೊಳ್ಳುತ್ತಿರುವುದು ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಸದ್ಯ ಪುತ್ರ-ಸೊಸೆ-ಮೊಮ್ಮಕ್ಕಳೊಂದಿಗೆ ಕಾರಿನಲ್ಲಿ ಮದ್ದೂರಿನತ್ತ ಪ್ರಯಾಣ ಬೆಳೆಸಿರುವ ಫರ್ಝಾನ ಅವರಿಗೆ ಸುಖದ ದಿನಗಳು ಬರಲಿ ಎಂಬುದೇ ನಮ್ಮ ಆಶಯ.

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ - ವಿಶ್ವನಾಥ ಪಂಜಿಮೊಗರು

Edited By : Suman K
PublicNext

PublicNext

19/10/2024 01:22 pm

Cinque Terre

25.62 K

Cinque Terre

3

ಸಂಬಂಧಿತ ಸುದ್ದಿ