ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ರೇಲ್​​ ದಾಳಿ ರೂವಾರಿ ಯಾಹ್ಯಾ ಸಿನ್ವಾರ್ ಕಣ್ಣಿಗೆ ಗುಂಡಿಟ್ಟ ಇಸ್ರೇಲ್​ - ಭಯಾನಕ ಕೊನೆ ಕ್ಷಣಗಳು!

ಹಲವಾರು ಗಂಟೆಗಳ ಗಾಳಿ ಸುದ್ದಿಗಳ ಬಳಿಕ, ಅಂತಿಮವಾಗಿ ಅಕ್ಟೋಬರ್‌ 17, ಗುರುವಾರದಂದು ಯಾಹ್ಯಾ ಸಿನ್ವರ್ (Yahya Sinwar) ಸಾವಿಗೀಡಾಗಿರುವುದು ಖಚಿತವಾಯಿತು. ಇಸ್ರೇಲ್ ಮಿಲಿಟರಿ (Israel War), ಇಸ್ರೇಲಿ ಗುಪ್ತಚರ ಸಂಸ್ಥೆ ಶಿನ್‌ಬೆಟ್, 2011ರಲ್ಲಿ ಬಿಡುಗಡೆಯಾಗುವ ಮುನ್ನ ಸಿನ್ವರ್ ಇಸ್ರೇಲಿ ಸೆರೆಮನೆಯಲ್ಲಿರುವಾಗ ಸಂಗ್ರಹಿಸಿದ್ದ ಹಲ್ಲು ಮತ್ತು ಬೆರಳಚ್ಚಿನ ದಾಖಲೆಗಳ ಮೂಲಕ ಆತನನ್ನು ಗುರುತಿಸಿತ್ತು. ಅಕ್ಟೋಬರ್ 16, ಗುರುವಾರದಂದು ರಾಫಾದ ಟೆಲ್ ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲ್ ಸೇನೆ ನಡೆಸಿದ ಒಂದು ಯೋಜಿತವಲ್ಲದ ಮಿಲಿಟರಿ ಕಾರ್ಯಾಚರಣೆಯಲ್ಲಿ (Military Operation) ಸಿನ್ವರ್ ಹತ್ಯೆಯಾಗಿದ್ದಾನೆ. ಸಿನ್ವರ್ ಹತ್ಯೆ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಪಾಲಿಗೆ ಮಹತ್ವದ ಸಾಧನೆಯಾಗಿದೆ.

ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿ, 1,200ಕ್ಕೂ ಹೆಚ್ಚು ಜನರ ಹತ್ಯೆ ನಡೆಸಿ, 250 ಜನರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಸಿನ್ವರ್‌ನನ್ನು ಈ ದಾಳಿಯ ಹಿಂದಿನ ಸೂತ್ರಧಾರ ಎಂದು ಗುರುತಿಸಲಾಗಿತ್ತು. ಆತನ ಸಾವು ಪ್ರಸ್ತುತ ಯುದ್ಧದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ ಸಿನ್ವರ್, ಕಳೆದ ಒಂದು ವರ್ಷದಿಂದ ಗಾಜಾದಲ್ಲೇ ಬಚ್ಚಿಟ್ಟುಕೊಂಡಿದ್ದ. ಯುದ್ಧ ಆರಂಭವಾದ ಬಳಿಕ ಇಸ್ರೇಲ್ ಪಡೆಗಳು ಆತನನ್ನು ಗುರಿಯಾಗಿಸಲು ಹಲವಾರು ಪ್ರಯತ್ನಗಳನ್ನು ನಡೆಸಿದ್ದರೂ, ಆತ ಸೆರೆಯಾಗುವುದನ್ನು ಅಥವಾ ಹತ್ಯೆಯಾಗುವುದನ್ನು ತಪ್ಪಿಸಿಕೊಂಡಿದ್ದ.

ಅಕ್ಟೋಬರ್ 7ರ ಭೀಕರ ದಾಳಿ ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವೆಂದು ಗುರುತಿಸಲ್ಪಟ್ಟಿದೆ. ಅಂದಿನಿಂದಲೂ ಯಾಹ್ಯಾ ಸಿನ್ವರ್ ಇಸ್ರೇಲಿನ ಅತ್ಯಂತ ಮುಖ್ಯ ಗುರಿಯಾಗಿದ್ದ.

ಟೆಹರಾನ್‌ನಲ್ಲಿ ಹಮಾಸ್ ಮುಖ್ಯಸ್ಥನಾಗಿದ್ದ ಇಸ್ಮಾಯಿಲ್ ಹಾನಿಯೆ ಹತ್ಯೆಯಾದ ಬಳಿಕ ಯಾಹ್ಯಾ ಸಿನ್ವರ್ ಸಂಘಟನೆಯ ಮುಖಂಡನಾಗಿದ್ದ. ಇಸ್ಮಾಯಿಲ್ ಹಾನಿಯೆ ಹತ್ಯೆಯನ್ನೂ ಇಸ್ರೇಲ್ ಕೈಗೊಂಡಿತ್ತು ಎಂಬ ಆರೋಪಗಳಿವೆ. ತನ್ನ ಜೀವನದ ಬಹುತೇಕ ವರ್ಷಗಳನ್ನು ಇಸ್ರೇಲಿ ಜೈಲುಗಳಲ್ಲೇ ಕಳೆದಿದ್ದ ಸಿನ್ವರ್, ಹಾನಿಯೆ ಹತ್ಯೆಯ ಬಳಿಕ ಹಮಾಸ್‌ನಲ್ಲಿ ಜೀವಂತವಾಗಿದ್ದ ಅತ್ಯಂತ ಪ್ರಭಾವಿ ನಾಯಕನೆನಿಸಿದ್ದ.

ಸಿನ್ವರ್ ಗಾಜಾದ ಖಾನ್ ಯೂನಿಸ್ ಎಂಬ ಪಟ್ಟಣದಲ್ಲಿದ್ದ ಒಂದು ನಿರಾಶ್ರಿತ ಶಿಬಿರದಲ್ಲಿ 1962ರಲ್ಲಿ ಜನಿಸಿದ್ದ. ಹಮಾಸ್ ಸಂಘಟನೆ 1987ರಲ್ಲಿ ಸ್ಥಾಪನೆಗೊಂಡ ಅವಧಿಯಲ್ಲೇ ಆತ ಅದಕ್ಕೆ ಸೇರ್ಪಡೆಗೊಂಡಿದ್ದ. ಹಮಾಸ್ ಒಂದು ಕಟ್ಟುನಿಟ್ಟಿನ ಇಸ್ಲಾಮಿಕ್ ಸಿದ್ಧಾಂತದ ಪಾಲಕನಾಗಿದ್ದು, ಇಸ್ರೇಲನ್ನು ಇಲ್ಲವಾಗಿಸಿ, ಅಲ್ಲಿ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪಿಸುವ ಗುರಿ ಹೊಂದಿದೆ.

ಸೇರ್ಪಡೆಯಾದ ಕೆಲ ಕಾಲದ ಬಳಿಕ, ಸಿನ್ವರ್ ಹಮಾಸ್ ಸಂಘಟನೆಯ ಭದ್ರತಾ ವಿಭಾಗದ ಜವಾಬ್ದಾರಿ ವಹಿಸಿಕೊಂಡು, ಇಸ್ರೇಲ್ ಪರವಾಗಿ ಕಾರ್ಯಾಚರಿಸುವ ಬೇಹುಗಾರರನ್ನು ನಿರ್ಮೂಲನೆಗೊಳಿಸುವತ್ತ ಗಮನ ಹರಿಸಿದ.

1980ರ ದಶಕದ ಕೊನೆಯ ವೇಳೆಗೆ, ಇಸ್ರೇಲ್ ಆತನನ್ನು ಬಂಧಿಸಿತು. ವಿಚಾರಣೆಯ ವೇಳೆ ಆತ ಇಸ್ರೇಲ್ ಜೊತೆ ಕೈಜೋಡಿಸಿ ಕಾರ್ಯಾಚರಿಸುವ ಅನುಮಾನ ಹೊಂದಿದ್ದ 12 ಜನರನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದ. ಇದು ಆತನಿಗೆ ‘ದ ಬುಚರ್ ಆಫ್ ಖಾನ್ ಯೂನಿಸ್’ ಎಂಬ ಅಡ್ಡಹೆಸರು ನೀಡಿತ್ತು. ಇಬ್ಬರು ಇಸ್ರೇಲಿ ಯೋಧರ ಹತ್ಯೆ ಸೇರಿದಂತೆ, ಆತ ನಡೆಸಿದ ಅಪರಾಧಗಳಿಗೆ ಶಿಕ್ಷೆಯಾಗಿ, ಅವನಿಗೆ ನಾಲ್ಕು ಅವಧಿಯ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಯಿತು.

ಸೆರೆಮನೆಯಲ್ಲಿದ್ದಾಗ ಸಿನ್ವರ್ ಜೈಲಿನಲ್ಲಿ ಉತ್ತಮ ಜೀವನಮಟ್ಟ ನೀಡಬೇಕು ಎಂದು ಆಗ್ರಹಿಸಿ ಖೈದಿಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದ. ಆತ ಜೈಲಿನಲ್ಲಿದ್ದಾಗ ಹೀಬ್ರೂ ಭಾಷೆ ಮತ್ತು ಇಸ್ರೇಲಿ ಸಮಾಜವನ್ನು ಅಧ್ಯಯನ ನಡೆಸಿ, ಇಸ್ರೇಲ್ ಹೇಗೆ ಕಾರ್ಯಾಚರಿಸುತ್ತದೆ ಎಂಬ ಕುರಿತು ಹೆಚ್ಚಿನ ಜ್ಞಾನ ಪಡೆಯಲು ಪ್ರಯತ್ನಿಸಿದ್ದ.

2008ರಲ್ಲಿ ಇಸ್ರೇಲಿ ವೈದ್ಯರು ನೀಡಿದ ಚಿಕಿತ್ಸೆಯ ನೆರವಿನಿಂದ ಆತ ಮೆದುಳಿನ ಕ್ಯಾನ್ಸರ್ ಕಾಯಿಲೆಯಿಂದಲೂ ಚೇತರಿಸಿಕೊಂಡಿದ್ದ.

2011ರಲ್ಲಿ, ಖೈದಿಗಳ ಹಸ್ತಾಂತರ ಒಪ್ಪಂದದಡಿಯಲ್ಲಿ ಸಿನ್ವರ್ ಸೇರಿದಂತೆ 1,000 ಇತರ ಖೈದಿಗಳ ಬಿಡುಗಡೆ ನಡೆಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ಸೂಚಿಸಿದರು. ಈ ಹಸ್ತಾಂತರ ಒಪ್ಪಂದದಲ್ಲಿ, 2006ರಲ್ಲಿ ಗಡಿಯನ್ನು ದಾಟಿ ಹಮಾಸ್ ಬಂಧಿಸಿದ್ದ ಇಸ್ರೇಲಿನ ಯೋಧ ಗಿಲಾದ್ ಶಲಿತ್ ಬಿಡುಗಡೆಗೊಂಡಿದ್ದ.

ಅಕ್ಟೋಬರ್ 7ರ ದಾಳಿಯ ಪರಿಣಾಮವಾಗಿ ಒಂದು ವರ್ಷ ಕಾಲ ಯುದ್ಧ ನಡೆದಿದ್ದರೂ, ಈ ದಾಳಿಯ ಕುರಿತು ತನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಸಿನ್ವರ್ ಹೇಳಿರುವುದಾಗಿ ಆತನೊಡನೆ ಮಾತನಾಡಿದ್ದವರು ಹೇಳಿದ್ದಾರೆ. ಇಸ್ರೇಲನ್ನು ಕೆಣಕಿ, ಅದು ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುವಂತೆ ಮಾಡಿ, ಹತ್ತಾರು ಸಾವಿರ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿ, ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡು, ಹಮಾಸ್‌ಗೆ ಆತ್ಮೀಯವಾದ ಹೆಜ್ಬೊಲ್ಲಾ ಸಂಘಟನೆಯೂ ವಿನಾಶ ಹೊಂದಿದ್ದರೂ ಸಿನ್ವರ್ ಈ ಕುರಿತು ಯಾವುದೇ ಪಶ್ಚಾತ್ತಾಪವನ್ನು ಹೊಂದಿಲ್ಲ.

ನಾಲ್ವರು ಪ್ಯಾಲೆಸ್ತೀನಿಯನ್ ಅಧಿಕಾರಿಗಳು ಮತ್ತು ಮಧ್ಯ ಪೂರ್ವದ ಸರ್ಕಾರಗಳ ಮೂಲಗಳ ಪ್ರಕಾರ, ಸ್ವತಂತ್ರ ಪ್ಯಾಲೆಸ್ತೀನಿಯನ್ ರಾಜ್ಯದ ಸ್ಥಾಪನೆಗೆ ಸಶಸ್ತ್ರ ಹೋರಾಟವೇ ಏಕೈಕ ಮಾರ್ಗ ಎಂದು ಸಿನ್ವರ್ ನಂಬಿದ್ದ.

ಒಂದು ವರ್ಷದ ಯುದ್ಧದ ಬಳಿಕ, ಒಂದಷ್ಟು ಗಾಜಾದ ಜನತೆ ಸಿನ್ವರ್ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರೂ, ಸಿನ್ವರ್ ಹಮಾಸ್ ಸಂಘಟನೆಯ ಮೇಲೆ ಸ್ಥಿರವಾದ ನಿಯಂತ್ರಣ ಸಾಧಿಸಿದ್ದ.

ಇಸ್ರೇಲ್ ಸಿನ್ವರ್‌ನನ್ನು ‘ದುಷ್ಟತನದ ಮುಖ’ (ಫೇಸ್ ಆಫ್ ಇವಿಲ್) ಎಂದು ಕರೆದಿತ್ತು. ರಹಸ್ಯವಾಗಿಯೇ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ ಸಿನ್ವರ್, ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ. ಆತ ಸಂವಹನಕ್ಕೆ ಡಿಜಿಟಲ್ ವಿಧಾನವನ್ನು ಬಳಸುವ ಬದಲಿಗೆ, ತನ್ನ ನಂಬಿಕಾರ್ಹ ಸಂದೇಶವಾಹಕರನ್ನು ಮಾತ್ರವೇ ಬಳಸುತ್ತಿದ್ದ.

ಮೂರು ಹಮಾಸ್ ಮೂಲಗಳ ಪ್ರಕಾರ, ಕತಾರ್ ಮತ್ತು ಈಜಿಪ್ಟ್‌ಗಳ ನೇತೃತ್ವದಲ್ಲಿ ತಿಂಗಳುಗಳ ಕಾಲ ನಡೆದ ಸುದೀರ್ಘ ಕದನ ವಿರಾಮದ ವಿಫಲ ಮಾತುಕತೆಗಳ ಸಂದರ್ಭದಲ್ಲೂ ಸಿನ್ವರ್ ಸ್ವತಃ ಹಮಾಸ್ ಪರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ. ಆತನ ಸಂದೇಶಗಳು ಸಂದೇಶವಾಹಕರ ರಹಸ್ಯ ಜಾಲದ ಮೂಲಕ ಬರುತ್ತಿದ್ದರಿಂದ, ಮಧ್ಯಸ್ಥಿಕೆದಾರರು ದಿನಗಳ ಕಾಲ ಕಾಯಬೇಕಾಗುತ್ತಿತ್ತು.

ಹಮಾಸ್ ಇಸ್ರೇಲನ್ನು ಕೇವಲ ಓರ್ವ ರಾಜಕೀಯ ವಿರೋಧಿಯಾಗಿ ಅಲ್ಲದೆ, ಮುಸ್ಲಿಂ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಶಕ್ತಿ ಎಂದು ಪರಿಗಣಿಸಿದೆ. ಇಸ್ಲಾಮಿಕ್ ಚಳವಳಿಗಳ ತಜ್ಞರ ಪ್ರಕಾರ, ಸಿನ್ವರ್ ಮತ್ತು ಆತನ ಬೆಂಬಲಿಗರು ತಮ್ಮ ಸಂಕಷ್ಟ, ಸಮಸ್ಯೆಗಳನ್ನು ತ್ಯಾಗ ಎಂದು ಪರಿಗಣಿಸಿದ್ದಾರೆ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರವೇ, ಈ ಸಮಸ್ಯೆಗಳನ್ನು ದೊಡ್ಡ ಗುರಿಯ ಸಾಧನೆಗಾಗಿ ಈ ತ್ಯಾಗ ಮಾಡುತ್ತಿದ್ದೇವೆ ಎಂದು ಅವರು ಭಾವಿಸಿದ್ದರು.

ಯುದ್ಧಕ್ಕೆ ಮುನ್ನ, ಸಿನ್ವರ್ ಆಗಾಗ ಇಸ್ರೇಲ್ ನಿಯಂತ್ರಣದಲ್ಲಿದ್ದ ಗಾಜಾದಲ್ಲಿ ತನ್ನ ಆರಂಭಿಕ ಜೀವನದ ಕತೆಗಳನ್ನು ಹೇಳುತ್ತಿದ್ದ. ಸಿನ್ವರ್‌ನನ್ನು ಭೇಟಿಯಾಗಿದ್ದ, ಗಾಜಾದ ನಿವಾಸಿ ವಿಸ್ಸಮ್ ಇಬ್ರಾಹಿಂ, ಒಂದು ಬಾರಿ ಸಿನ್ವರ್ ತನ್ನ ತಾಯಿ ವಿಶ್ವಸಂಸ್ಥೆ ನೆರವಿನ ವಸ್ತುಗಳನ್ನು ಕಳುಹಿಸಿದ ಚೀಲದಿಂದ ಬಟ್ಟೆ ಹೊಲಿದು ಕೊಟ್ಟಿದ್ದಾಗಿ ಸಿನ್ವರ್ ನೆನೆಸಿಕೊಂಡಿದ್ದ ಎಂದಿದ್ದರು.

ಜೈಲಿನಲ್ಲಿದ್ದಾಗ ಸಿನ್ವರ್ ಆತ್ಮಕಥೆಯ ರೀತಿಯ ಒಂದು ಕಾದಂಬರಿ ಬರೆದಿದ್ದ. ಅದರಲ್ಲಿ ಆತ ಸೈನಿಕರು ಪ್ಯಾಲೆಸ್ತೀನಿಯನ್ ಮನೆಗಳನ್ನು ಧ್ವಂಸಪಡಿಸುವುದನ್ನು ದೈತ್ಯ ಮೃಗವೊಂದು ತನ್ನ ಬೇಟೆಯ ಮೂಳೆಗಳನ್ನು ತಿಳಿಯುವುದಕ್ಕೆ ಹೋಲಿಸಿದ್ದ.

ಭೀತಿ ಮೂಡಿಸುವಂತಹ ಸ್ವಭಾವ ಮತ್ತು ಇದ್ದಕ್ಕಿದ್ದಂತೆ ಕೋಪ ಮಾಡಿಕೊಳ್ಳುವ ಗುಣದ ಹೊರತಾಗಿಯೂ, ಗಾಜಾದ ಜನರ ದೈನಂದಿನ ಕಷ್ಟಗಳನ್ನು ಸಿನ್ವರ್ ಅರ್ಥ ಮಾಡಿಕೊಂಡಿದ್ದ ಎಂದು ಸ್ಥಳೀಯರು ಶ್ಲಾಘಿಸಿದ್ದರು. ಪತ್ರಕರ್ತರು ಮತ್ತು ಹಮಾಸ್ ಅಧಿಕಾರಿಗಳ ಪ್ರಕಾರ, ಜನರ ಸಂಕಷ್ಟಗಳೊಡನೆ ಸಿನ್ವರ್ ತನ್ನನ್ನು ಗುರುತಿಸಿಕೊಂಡಿದ್ದರಿಂದ ಜನರಿಗೆ ಆತನೊಡನೆ ಇರುವುದು ಹೆಚ್ಚು ಸಮಾಧಾನ ನೀಡುತ್ತಿತ್ತು.

ಅರಬ್ ಮತ್ತು ಪ್ಯಾಲೆಸ್ತೀನಿಯನ್ ಅಧಿಕಾರಿಗಳು ಸಿನ್ವರ್‌ನನ್ನು ಹಮಾಸ್‌ನ ಕಾರ್ಯತಂತ್ರ ಮತ್ತು ಮಿಲಿಟರಿ ಶಕ್ತಿಯ ಹಿಂದಿನ ಮುಖ್ಯ ಯೋಜಕ ಎಂದು ಪರಿಗಣಿಸಿದ್ದರು. 2012ರಲ್ಲಿ ಇರಾನ್‌ಗೆ ಭೇಟಿ ನೀಡಿದ್ದ ಸಿನ್ವರ್, ಆ ದೇಶದೊಡನೆ ಆತ್ಮೀಯ ಸಂಬಂಧ ಹೊಂದಿದ್ದ. ಇದು ಅವನಿಗೆ ಹಮಾಸ್ ಸಾಮರ್ಥ್ಯ ಹೆಚ್ಚಿಸಲು ನೆರವಾಗಿತ್ತು.

ನಬಿಹ್ ಅವಾದಾ ಎಂಬ ಮಾಜಿ ಲೆಬಾನೀಸ್ ಕಮ್ಯುನಿಸ್ಟ್ ಹೋರಾಟಗಾರ 1991ರಿಂದ 1995ರ ತನಕ ಸಿನ್ವರ್ ಜೊತೆ ಆಶ್ಕೆಲಾನ್ ಸೆರೆಮನೆಯಲ್ಲಿದ್ದ. ಆತನ ಪ್ರಕಾರ, ಸಿನ್ವರ್ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ 1993ರಲ್ಲಿ ನಡೆದ ಓಸ್ಲೋ ಶಾಂತಿ ಒಪ್ಪಂದವನ್ನು ‘ದುರಂತ’ ಎಂದು ಕರೆದಿದ್ದ. ಆತ ಈ ಒಪ್ಪಂದವನ್ನು ಇಸ್ರೇಲಿನ ಒಂದು ತಂತ್ರ ಎಂದು ಭಾವಿಸಿದ್ದು, ಪ್ಯಾಲೆಸ್ತೀನಿಯನ್ ಭೂಮಿಯನ್ನು ಮರಳಿ ಗಳಿಸಲು ಮಾತುಕತೆಯಿಂದ ಸಾಧ್ಯವೇ ಇಲ್ಲ, ಅದಕ್ಕೆ ಸಶಸ್ತ್ರ ಹೋರಾಟ ಮಾತ್ರವೇ ಪರಿಹಾರ ಎಂದು ನಂಬಿದ್ದ.

1993ರ ಓಸ್ಲೋ ಶಾಂತಿ ಒಪ್ಪಂದ ಇಸ್ರೇಲಿ - ಪ್ಯಾಲೆಸ್ತೀನಿಯನ್ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ನಡುವೆ ನಡೆದ ಹಲವು ಒಪ್ಪಂದಗಳ ಗುಚ್ಛವಾಗಿತ್ತು. ಈ ಒಪ್ಪಂದದ ಪರಿಣಾಮವಾಗಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗಳು ಮೊದಲ ಬಾರಿಗೆ ಪರಸ್ಪರರನ್ನು ಗುರುತಿಸಿದ್ದವು. ಇಸ್ರೇಲ್ ಪಿಎಲ್ಒ ಅನ್ನು ಅಧಿಕೃತವಾಗಿ ಗುರುತಿಸಿದ್ದರೆ, ಪಿಎಲ್ಒ ಇಸ್ರೇಲಿಗೆ ಒಂದು ದೇಶವಾಗಿ ಇರುವ ಹಕ್ಕಿದೆ ಎಂದು ಒಪ್ಪಿಕೊಂಡಿತ್ತು. ಈ ಒಪ್ಪಂದದ ಪರಿಣಾಮವಾಗಿ, ವೆಸ್ಟ್ ಬ್ಯಾಂಕ್ ಮತ್ತು ಗಾಜಾಗ ಭಾಗಗಳಲ್ಲಿ ಪ್ಯಾಲೆಸ್ತೀನಿಯನ್ ಸ್ವಯಂ ಆಡಳಿತಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಅಲ್ಲಿ ಶಾಶ್ವತ ಶಾಂತಿಯನ್ನು ಮಾತ್ರ ಸಾಧಿಸಲು ಸಾಧ್ಯವಾಗಲೇ ಇಲ್ಲ.

ಸಿನ್ವರ್ ಓರ್ವ ಹಠಮಾರಿ ಮತ್ತು ದೃಢ ನಿಶ್ಚಯದ ವ್ಯಕ್ತಿ ಎಂದು ಅವಾದಾ ಬಣ್ಣಿಸುತ್ತಾರೆ. ಹಮಾಸ್ ಅಥವಾ ಹೆಜ್ಬೊಲ್ಲಾ ಇಸ್ರೇಲನ್ನು ಗುರಿಯಾಗಿಸಿ ದಾಳಿ ನಡೆಸಿದಾಗೆಲ್ಲ ಸಿನ್ವರ್ ಅತ್ಯಂತ ಸಂಭ್ರಮಿಸುತ್ತಿದ್ದ. ಮಿಲಿಟರಿ ಕ್ರಮಗಳೇ ಪ್ಯಾಲೆಸ್ತೀನನ್ನು ಇಸ್ರೇಲಿ ನಿಯಂತ್ರಣದಿಂದ ಬಿಡುಗಡೆಗೊಳಿಸಬಹುದು ಎಂದು ಆತ ಭಾವಿಸಿದ್ದ.

ಖೈದಿಗಳ ಮೇಲೆ ಸಿನ್ವರ್ ಅತ್ಯಂತ ಪ್ರಭಾವ ಬೀರಿದ್ದ. ಧಾರ್ಮಿಕ ಮನೋಭಾವ ಹೊಂದಿರದ, ಇಸ್ಲಾಮಿಸ್ಟ್ ಗುಂಪುಗಳಿಗೆ ಸೇರದ ಖೈದಿಗಳ ಮೇಲೂ ಆತ ಪ್ರಭಾವ ಬೀರಿದ್ದ.

ಇಸ್ರೇಲ್ 2005ರಲ್ಲಿ ಗಾಜಾದಿಂದ ಹೊರಬಂದ ಬಳಿಕ, ಸಿನ್ವರ್ ನಾಯಕತ್ವದಲ್ಲಿ ಗಾಜಾವನ್ನು ಒಂದು ಮಿಲಿಟರಿ ನೆಲೆಯಾಗಿ ಪರಿವರ್ತಿಸುವ ಸಲುವಾಗಿ ಅಪಾರ ಪ್ರಮಾಣದ ಹಣ ಮತ್ತು ಮಾನವ ಸಂಪನ್ಮೂಲ ಒದಗಿಸಲಾಯಿತು. ಹಮಾಸ್ ಗಾಜಾದ ನೆಲದಾಳದಲ್ಲಿ ಅಪಾರ ಪ್ರಮಾಣದ ಸುರಂಗಗಳನ್ನು ಸ್ಥಾಪಿಸಿ, ಆಯುಧಗಳನ್ನು ಸಂಗ್ರಹಿಸಿ, ರಾಕೆಟ್‌ಗಳನ್ನು ಉತ್ಪಾದಿಸಿತ್ತು. ಅದರ ಏಕೈಕ ಗುರಿ ಇಸ್ರೇಲ್ ವಿರುದ್ಧ ಯುದ್ಧ ನಡೆಸಿ, ಅದನ್ನು ನಾಶಪಡಿಸುವುದಾಗಿತ್ತು.

ಅಕ್ಟೋಬರ್ 7ರ ದಾಳಿಯನ್ನು ಯೋಜಿಸುವ ಮುನ್ನ, ಸಿನ್ವರ್ ಇಸ್ರೇಲ್ ಮೇಲೆ ಶಕ್ತಿಶಾಲಿ ದಾಳಿ ನಡೆಸುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ್ದ. ಹಿಂದಿನ ವರ್ಷ ಮಾಡಿದ ಭಾಷಣವೊಂದರಲ್ಲಿ, ತಾನು ಇಸ್ರೇಲಿಗೆ ಅಪಾರ ಸಂಖ್ಯೆಯ ಯೋಧರು ಮತ್ತು ರಾಕೆಟ್‌ಗಳನ್ನು ಕಳುಹಿಸುವುದಾಗಿ ಸಿನ್ವರ್ ಘೋಷಿಸಿದ್ದ. ಈ ಯುದ್ಧದ ಪರಿಣಾಮವಾಗಿ, ಜಗತ್ತು ಇಸ್ರೇಲ್ 1967ರಲ್ಲಿ ಆಕ್ರಮಿಸಿದ್ದ ಪ್ರದೇಶದಲ್ಲಿ ಪ್ಯಾಲೆಸ್ತೀನಿಯನ್ ರಾಷ್ಟ್ರ ಸೃಷ್ಟಿಯಾಗುವಂತೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ, ಅಥವಾ ಇಸ್ರೇಲ್ ಜಾಗತಿಕವಾಗಿ ಏಕಾಂಗಿಯಾಗುತ್ತದೆ ಎಂದು ಆತ ಭವಿಷ್ಯ ನುಡಿದಿದ್ದ.

ಸಿನ್ವರ್ ಈ ಭಾಷಣ ಮಾಡಿದ ವೇಳೆಗಾಗಲೇ, ಆತ ಮತ್ತು ಹಮಾಸ್ ಮಿಲಿಟರಿ ಮುಖ್ಯಸ್ಥ ಮುಹಮ್ಮದ್ ದೀಫ್ (2024 ಜುಲೈನಲ್ಲಿ ಇಸ್ರೇಲ್‌ನಿಂದ ಹತ್ಯೆಗೀಡಾಗಿದ್ದಾನೆ) ರಹಸ್ಯವಾಗಿ ಇಸ್ರೇಲ್ ಮೇಲಿನ ಆಕ್ರಮಣವನ್ನು ಯೋಜಿಸಿದ್ದರು. ಅವರು ಉದ್ದೇಶಿತ ಆಕ್ರಮಣವನ್ನು ಹೋಲುವ ರೀತಿಯಲ್ಲಿ ಸಾರ್ವಜನಿಕ ತರಬೇತಿಗಳನ್ನೂ ನೀಡಿದ್ದರು.

ಈಡೇರದ ಸಿನ್ವರ್ ಗುರಿಗಳು

ಇಸ್ರೇಲ್ - ಹಮಾಸ್ ಯುದ್ಧ ಜಾಗತಿಕ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡರೂ, ಪ್ಯಾಲೆಸ್ತೀನಿಯನ್ ದೇಶದ ಸ್ಥಾಪನೆಯ ಗುರಿ ಈಗ ಎಂದಿಗಿಂತಲೂ ದೂರವಾದಂತೆ ಕಾಣುತ್ತಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ಯಾಲೆಸ್ತೀನಿಯನ್ ರಾಷ್ಟ್ರ ನಿರ್ಮಾಣಕ್ಕೆ ಸಮಯ ನಿಗದಿಪಡಿಸುವುದು ಸೇರಿದಂತೆ, ಯುದ್ಧಾನಂತರದ ಪರಿಸ್ಥಿತಿಯ ಕುರಿತು ಗಾಜಾಗೆ ಪ್ರಸ್ತಾವನೆ ನೀಡುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಮಾತುಕತೆ ನಡೆಸುವುದು ಭಯೋತ್ಪಾದನೆಗೆ ಪಾರಿತೋಷಕ ನೀಡಿದಂತಾಗಲಿದೆ ಎಂದು ನೆತನ್ಯಾಹು ಅಭಿಪ್ರಾಯ ಪಟ್ಟಿದ್ದಾರೆ.

ಇಸ್ರೇಲಿನ ಶಿನ್ ಬೆಟ್ ಸಂಸ್ಥೆಯ ಮಾಜಿ ಅಧಿಕಾರಿ, ಮೈಕೇಲ್ ಕೌಬಿ ಸಿನ್ವರ್‌ನನ್ನು ಜೈಲಿನಲ್ಲಿ 180 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದನ್ನು ನೆನೆಸಿಕೊಂಡಿದ್ದಾರೆ. ಸಿನ್ವರ್ ಓರ್ವ ಪ್ರಭಾವಶಾಲಿ ವ್ಯಕ್ತಿಯಾಗಿದ್ದರಿಂದ, ಆತನ ಉಪಸ್ಥಿತಿ ಇತರರಲ್ಲಿ ಭಯ, ಆತಂಕ ಮೂಡಿಸುತ್ತಿತ್ತು. ಅದಕ್ಕೆ ಪೂರಕವಾಗಿ, ಆತ ತನ್ನ ಶಕ್ತಿ, ಪ್ರಭಾವ, ಆತ್ಮವಿಶ್ವಾಸ, ಹಾಗೂ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದ. ಅದರೊಡನೆ, ಜೈಲಿನ ಅಧಿಕಾರಿಗಳೊಡನೆಯೂ ವಾದಿಸುತ್ತಿದ್ದ ಎಂದು ಕೌಬಿ ವಿವರಿಸಿದ್ದಾರೆ.

ಜೈಲಿನಲ್ಲಿದ್ದಾಗ ಅಂದಾಜು 28 - 29 ವರ್ಷ ವಯಸ್ಸಿನ ಸಿನ್ವರ್‌ನನ್ನು ನೀನಿನ್ನೂ ಯಾಕೆ ಮದುವೆಯಾಗಿಲ್ಲ ಎಂದು ಕೌಬಿ ಒಂದು ಬಾರಿ ಪ್ರಶ್ನಿಸಿದ್ದರಂತೆ. ಆಗ ಸಿನ್ವರ್, “ಹಮಾಸ್ ಸಂಘಟನೆಯೇ ನನ್ನ ಪತ್ನಿ, ನನ್ನ ಮಗು, ಮತ್ತು ನನ್ನ ಸರ್ವಸ್ವ” ಎಂದು ಉತ್ತರಿಸಿದ್ದನಂತೆ. ಆದರೆ, 2011ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸಿನ್ವರ್ ಮದುವೆಯಾಗಿ, ಮೂವರು ಮಕ್ಕಳನ್ನು ಹೊಂದಿದ್ದ.

ವರದಿ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕೃಪೆ - ನ್ಯೂಸ್ 18 ಕನ್ನಡ

Edited By : Nagaraj Tulugeri
PublicNext

PublicNext

18/10/2024 08:59 pm

Cinque Terre

19.55 K

Cinque Terre

7