ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಲಾರಿ ಚಾಲಕನಿಗೆ ಅಬಕಾರಿ ಅಧಿಕಾರಿಗಳಿಂದ ಥಳಿತ, ಚಾಲಕನಿಂದ ಮಾಡಲಾದ ವಿಡಿಯೋ ವೈರಲ್

ಕಾರವಾರ: ರಾಜ್ಯ ಗಡಿಯಾಗಿರುವ ಮಾಜಾಳಿ ಚೆಕ್ ಪೋಸ್ಟ್‌ ನಲ್ಲಿ ಲಾರಿ ಚಾಲಕನಿಗೆ ಅಬಕಾರಿ ಸಿಬ್ಬಂದಿ ಥಳಿಸಿರುವ ಬಗ್ಗೆ ಲಾರಿ ಚಾಲಕರೊಬ್ಬರು ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ಕಾರವಾರದ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ ಪೋಸ್ಟ್ ಇದೆ. ಇಲ್ಲಿ ಕೆಲ ಅಮಾಯಕ ಜನರಿಗೆ ತಡೆದು ತಪಾಸಣೆ ಹೆಸರಿನಲ್ಲಿ ವಿನಾಕಾರಣ ತೊಂದರೆ ಕೊಡುವುದು, ದಾಖಲೆಗಳು ಸರಿಯಾಗಿಲ್ಲ ಎಂದು ಗದರಿಸಿ ಹಣ ಕೇಳುವ ಕಾರ್ಯ ಈ ಚೆಕ್ ಪೋಸ್ಟ್ ನಲ್ಲಿ ನಡೆಯುತ್ತಿರುವ ಬಗ್ಗೆ ಆರೋಪಗಳು ಆಗಾಗ ಕೇಳಿಬರುತ್ತಿವೆ‌. ಇದೀಗ ಲಾರಿ ಚಾಲಕರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ವೈರಲ್ ಆಗಿದೆ.. ಅ. 15 ರಂದು ತಾನು ಗೋವಾದಿಂದ ಕೇರಳ ರಾಜ್ಯಕ್ಕೆ ಹೋಗಲು ಗೋವಾ ಗಡಿ ದಾಟಿ ಕರ್ನಾಟಕದ ಗಡಿ ಪ್ರವೇಶಿಸುವಾಗ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತನ್ನನ್ನು ಅಬಕಾರಿ ಸಿಬ್ಬಂದಿ ತಡೆದು ವಾಹನದಲ್ಲಿ ಏನಿದೆ ನೋಡಬೇಕು ಎಂದು ಹೇಳಿದ್ದಾರೆ. ವಾಟರ್ ಫಿಲ್ಟರ್ ವಸ್ತುಗಳು ಇರುವುದಾಗಿ ತಾನು ಹೇಳಿದ್ದೇನೆ. ಮಳೆ ಸುರಿಯುತ್ತಿರುವುದರಿಂದ ವಾಹನದಲ್ಲಿನ ವಸ್ತುಗಳಿಗೆ ನೀರು ತಾಗಬಾರದೆಂಬ ಕಾರಣಕ್ಕೆ ದಪ್ಪ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ಹಗ್ಗದಿಂದ ಗಟ್ಟಿಯಾಗಿ ಕಟ್ಟಲಾಗಿತ್ತು. ಅದನ್ನು ಬಿಚ್ಚಲು ಹೇಳಿದ್ದಕ್ಕೆ ತನ್ನೊಬ್ಬನಿಂದ ಬಿಚ್ಚಲು ಸಾಧ್ಯವಾಗುವುದಿಲ್ಲ. ತಾವು ಬಿಚ್ಚಿ ನೋಡಬಹುದು ಎಂದು ತಾನು ಉತ್ತರಿಸಿದ್ದಕ್ಕೆ ತನ್ನ ಕಪಾಳಕ್ಕೆ ಹೊಡೆದರು. ಹಾಗೂ ಕಚೇರಿಗೆ ಕರೆದೊಯ್ದು ಮೂರು ಜನ ಸೇರಿ ಥಳಿಸಿದ್ದಾರೆ. ತನ್ನ ಲೈಸನ್ಸ್, ವಾಹನ ಡಾಕ್ಯುಮೆಂಟ್ ವಶಕ್ಕೆ ತೆಗೆದುಕೊಂಡರು, ಹಾಗೂ ನಿಂದನೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ತನ್ನನ್ನು ತಡೆಹಿಡಿದಿದ್ದಾರೆ ಎಂದು ಚಾಲಕ ವಿಡಿಯೋದಲ್ಲಿ ವಿವರಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮಾಯಕ ಲಾರಿ ಚಾಲಕನಿಗೆ ಥಳಿಸಿದ್ದು ನಿಜವಾಗಿದ್ದರೆ ತಪ್ಪು ಮಾಡಿರುವ ಅಬಕಾರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಕಾಮೆಂಟ್ ಮಾಡುವ‌ ಮೂಲಕ ಆಗ್ರಹಿಸುತ್ತಿದ್ದಾರೆ.

Edited By : Ashok M
PublicNext

PublicNext

16/10/2024 02:11 pm

Cinque Terre

22.82 K

Cinque Terre

1

ಸಂಬಂಧಿತ ಸುದ್ದಿ