ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಬಾರಿ ರೈತರ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸವದತ್ತಿ : ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಜಲಾಶಯಗಳು, ಕೆರೆಕಟ್ಟೆಗಳು ತುಂಬಿದ್ದು, ರೈತರ ಮುಖದಲ್ಲಿ ಹರ್ಷದ ಹೊನಲು ಮೂಡಿದೆ. ಮಲಪ್ರಭಾ ಜಲಾಶಯದಲ್ಲಿ ರೈತರ ಅಗತ್ಯಕ್ಕೆ ತಕಷ್ಟು ನೀರು ಲಭ್ಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲ್ಗುಣದಿಂದಾಗಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆಯಾಗಿದೆ ಎಂದರು.

ಮಲಪ್ರಭಾ ಜಲಾಶಯ 50 ವರ್ಷದ ಇತಿಹಾಸದಲ್ಲಿ 10ನೇ ಬಾರಿಗೆ ಭರ್ತಿಯಾಗಿದೆ. ಮಲಪ್ರಭಾ ಜಲಾಶಯ ಪೂರ್ತಿ ತುಂಬಿರುವುದರಿಂದ ರೈತರಿಗೆ ಅಗತ್ಯವಾದಾಗ ನೀರು ಬಿಡುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಕಳೆದ ವರ್ಷ ಮಳೆಯ ಅಭಾವದಿಂದಾಗಿ ಜಲಾಶಯ ತುಂಬದೆ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ವರ್ಷ ಜಲಾಶಯ ಭರ್ತಿಯಾಗಿದೆ. ಜಲಾಶಯದ ಗರಿಷ್ಟ ಮಟ್ಟ 2079.5 ಅಡಿ - 37.731 ಟಿಎಂಸಿ ಸಾಮರ್ಥ್ಯವಿದ್ದು ಪೂರ್ತಿ ನೀರು ಸಂಗ್ರಹವಾಗಿದೆ. ಇಂದು ಎಲ್ಲರ ಜೊತೆ ಸೇರಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ್ದೇನೆ. ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಲಾಶಯದಲ್ಲಿ ಒಟ್ಟು 37 ಟಿಎಂಸಿ ನೀರು ತುಂಬಿದ್ದು, ಇದರಲ್ಲಿ 16 ಟಿಎಂಸಿ ನೀರು ಕುಡಿಯುವುದಕ್ಕೆ ಹಾಗೂ 16 ಟಿಎಂಸಿ ನೀರಾವರಿಗೆ ಬೇಕಾಗುತ್ತದೆ. ರೈತರಿಗೆ ನೆರವು ನೀಡುವುದೇ ನಮ್ಮ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಲಾಶಯ ಭರ್ತಿಯಾಗಿ ನಮಗೆಲ್ಲ ಖುಷಿ ತಂದಿದೆ. ಈ ಜಲಾಶಯದ ಮೊದಲ ಆದ್ಯತೆ ಕುಡಿಯುವ ನೀರು. ಹಾಗೆಯೇ, ರೈತರ ಹಿತ ಕಾಯುವುದಕ್ಕೆ ಕೂಡ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

Edited By : Vinayak Patil
PublicNext

PublicNext

15/10/2024 04:02 pm

Cinque Terre

17.14 K

Cinque Terre

0

ಸಂಬಂಧಿತ ಸುದ್ದಿ