ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 11 ದಿನದ ಅದ್ದೂರಿ ಮೆರವಣಿಗೆಯ ಮೂಲಕ ಗಣೇಶನಿಗೆ ವಿದಾಯ ಹೇಳಲಾಯಿತು. 11 ದಿನದ ಹಾಗೂ ಅಂತಿಮ ವಿಸರ್ಜನೆ ಹಿನ್ನಲೆ ಅವಳಿ ನಗರದಲ್ಲಿ ಒಟ್ಟು 105 ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಿತು.
ಹುಬ್ಬಳ್ಳಿಯ ಮರಾಠಗಲ್ಲಿ, ಮ್ಯಾದರ ಓಣಿ, ಶಕ್ತಿ ನಗರ, ಪೆಂಡಾರ ಗಲ್ಲಿ, ದಾಜಿಬಾನ್ ಪೇಟೆ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಪ್ರತಿಷ್ಠಾಪನೆಯಾಗಿರೋ ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆ ಗಮನ ಸೆಳೆಯಿತು.
ಬೃಹತ್ ಡಿಜೆ, ವಾದ್ಯಗಳ ಸದ್ದಿಗೆ ಯುವಕ, ಯುವತಿಯರು ಕುಣಿದು, ಕುಪ್ಪಳಿಸಿದರು. ರಾತ್ರಿ ಹತ್ತು ಗಂಟೆಯವರಿಗೆ ಡಿಜೆಗೆ ಅವಕಾಶ ನೀಡಲಾಗಿತ್ತು. ಇಂದಿರಾ ಗಾಂಧಿ ಗ್ಲಾಸ್‌ಹೌಸ್ ಪಕ್ಕದ ಪಾಲಿಕೆ ನಿರ್ಮಾಣ ಮಾಡಿರುವ ಬೃಹತ್ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು. ಪೊಲೀಸ್ ಇಲಾಖೆಯಿಂದ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.
ಆರ್ ಎಎಫ್ ಸೇರಿದಂತೆ 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್, ಜಿಲ್ಲಾಡಳಿತ, ಆರೋಗ್ಯ, ಕಿಮ್ಸ್ ಮತ್ತು ಮಹಾನಗರ ಪಾಲಿಕೆ ಸಂಯೋಗದಲ್ಲಿ ಸುರಕ್ಷಿತ ತಾಣವಗಳ ನಿರ್ಮಾಣ ಮಾಡಲಾಗಿತ್ತು.
ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ನಟ ದರ್ಶನ್ ಫೋಟೋ ಪ್ರತ್ಯಕ್ಷವಾಯಿತು. ಅಭಿಮಾನಿಯೊಬ್ಬ ದರ್ಶನ್ ಫೋಟೋ ಹಿಡಿದು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಗಣೇಶ ಮೂರ್ತಿ ಮೆರವಣಿಗೆ ದರ್ಶನ ಅಭಿಮಾನಿ ಅಭಿಮಾನ ಮೆರೆದಿದ್ದಾನೆ.
ಇನ್ನೂ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಗಣೇಶ ಮೂರ್ತಿ ಮೆರವಣಿಗೆ ಬಂದೋಬಸ್ತ್‌ನ ಉಸ್ತುವಾರಿ ವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಖುದ್ದು ತಾವೇ ಮೆರವಣಿಗೆ ಸ್ಥಳದಲ್ಲಿ ಬಿಡುಬಿಟ್ಟು ಮೆರವಣಿಗೆ ಬಂದೋಬಸ್ತ್ ಅವಲೋಕಿಸಿದರು.
ಕಮಿಷಮರ್ ಅವರನ್ನು ಕಂಡ ಯುವಕರು ಶಶಿಕುಮಾರ್ ಅವರ ಕೈಕುಲಕಿದರೆ, ಇನ್ನೂ ಕೆಲವರು ನಮಸ್ಕರಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2024 10:01 am