ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನೂತನ ಪಶು ಚಿಕಿತ್ಸಾಲಯ ಕಾರ್ಯಾರಂಭ

ಹಾನಗಲ್ಲ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ಪಶು ಚಿಕಿತ್ಸಾಲಯ ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಮೊದಲ ಹಂತದಲ್ಲಿ ಹಾನಗಲ್ಲ ತಾಲೂಕಿನ ಸಮ್ಮಸಗಿ ಸೇರಿದಂತೆ 20 ಕಡೆಗಳಲ್ಲಿ ಪಶು ಚಿಕಿತ್ಸಾಲಯ ಆರಂಭಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಹೈನುಗಾರಿಕೆ ಅಭಿವೃದ್ಧಿ ಪಥದಲ್ಲಿದ್ದು, ನಿತ್ಯವೂ 21 ಸಾವಿರ ಲೀ. ಹಾಲು ಉತ್ಪಾದಿಸಲಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗುವ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹಸು ಘಟಕ ಸ್ಥಾಪಿಸಲು ಸಹಾಯಧನ ವಿತರಿಸುತ್ತಿದೆ. ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀ. ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ತಾಲೂಕಿನಲ್ಲಿ ಶೇ. 50 ರಷ್ಟು ಸಹಾಯಧನದಲ್ಲಿ 50 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ. 6,400 ಮೇವಿನ ಕಿರು ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ ಅವರು ಪಶುಪಾಲಕರಿಗೆ ಆರ್ಥಿಕ ನಷ್ಟ ತಡೆಯಲು ರಾಜ್ಯ ಸರಕಾರ ಅನುಗ್ರಹ ಯೋಜನೆ ಜಾರಿಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಮರಣ ಹೊಂದಿದ ಜಾನುವಾರುಗಳ ಮಾಲಿಕರಿಗೆ 10 ಸಾವಿರ ಪರಿಹಾರದಂತೆ ಒಟ್ಟು 25 ಫಲಾನುಭವಿಗಳಿಗೆ ಒಟ್ಟು 2.50 ಲಕ್ಷ ವಿತರಿಸಲಾಗಿದೆ. ಸಿಬ್ಬಂದಿ ಕೊರತೆಯ ಮಧ್ಯೆಯೂ ಉತ್ತಮ ಪಶುಚಿಕಿತ್ಸೆಗೆ ಗಮನ ನೀಡಲಾಗಿದ್ದು, ತಾಲೂಕಿಗೆ ಹೊಸದಾಗಿ ಇಬ್ಬರು ಪಶು ವೈದ್ಯರನ್ನು ಸರಕಾರ ಒದಗಿಸಿದೆ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಜಾನುವಾರುಗಳನ್ನು ಕಡ್ಡಾಯವಾಗಿ ವಿಮಾ ವ್ಯಾಪ್ತಿಗೆ ಒಳಪಡಿಸಿದರೆ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ. ಈ ಕುರಿತು ರೈತ ಸಮೂಹದಲ್ಲಿ ಜಾಗೃತಿ ಮೂಡಬೇಕಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಹೇಮಾವತಿ ದೊಡ್ಡಮನಿ, ಉಪಾಧ್ಯಕ್ಷ ಮಾರುತಿ ಜಿಗಳಿಕೊಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ತಾಪಂ ಕೆಡಿಪಿ ಸದಸ್ಯ ರಾಜಕುಮಾರ ಜೋಗಪ್ಪನವರ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಮಾಲತೇಶ ಈಳಿಗೇರ, ಈರಣ್ಣ ಬೈಲವಾಳ, ನವೀನ್ ದೇಶಪಾಂಡೆ, ಶಿವಾನಂದ ವಡ್ಡರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/09/2024 08:28 pm

Cinque Terre

15.02 K

Cinque Terre

0