ಕಾರವಾರ(ಉತ್ತರ ಕನ್ನಡ): ಹೀಗೆ ಕಾರವಾರ ಶಾಸಕಿ ರೂಪಾಲಿಯವರಿಗೆ ಅಧಿವೇಶನದಲ್ಲಿಂದು ಉತ್ತರಕನ್ನಡದ ಬಹುದೊಡ್ಡ ಸಮಸ್ಯೆ ಹಾಗೂ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮಾತನಾಡಲು ಅವಕಾಶ ನೀಡದೆ ತಡೆಯಲು ಪ್ರಯತ್ನಿಸಿರುವ ಉತ್ತರ ಕನ್ನಡಿಗರೇ ಆದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಡೆ ಇದೀಗ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಉತ್ತರ ಕನ್ನಡದ ಸಾಮಾಜಿಕ ಹೋರಾಟಗಾರರು ಕೂಡ ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕರೂ ಆಗಿರುವ ಕಾಗೇರಿಯವರ ಈ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಿಂದ ವಿಧಾನಸಭಾಧ್ಯಕ್ಷರನ್ನೂ ಸೇರಿ ನಾಲ್ವರು ಬಿಜೆಪಿ ಶಾಸಕರು, ಓರ್ವ ಕಾಂಗ್ರೆಸ್ ಶಾಸಕ, ಓರ್ವ ಬಿಜೆಪಿ ಸಚಿವರು ಅಧಿವೇಶನದಲ್ಲಿದ್ದರೂ ಉತ್ತರ ಕನ್ನಡದ ಅಗತ್ಯತೆಯಾದ, ಬಹುಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಚಕಾರವೆತ್ತಿಲ್ಲ. ಹೀಗಿರುವಾಗ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾತನಾಡಲು ಮುಂದಾದರೂ ಶಿರಸಿ ಶಾಸಕ ಕಾಗೇರಿಯವರೇ ವಿಧಾನಸಭಾಧ್ಯಕ್ಷ ಸ್ಥಾನದ ಮೂಲಕ ಅವರ ದನಿ ಅಡಗಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಲ್ಲೇ ಮನಸ್ಸಿಲ್ಲ ಎನ್ನುವುದು ಜಿಲ್ಲೆಯ ಜನತೆಯ ಅಭಿಪ್ರಾಯವಾಗಿದ್ದು, ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ಇಂದಿನ ಅಧಿವೇಶನ ಸಾಕ್ಷಿಯಾಗಿರುವುದಂತೂ ಸುಳ್ಳಲ್ಲ.
PublicNext
15/09/2022 07:25 pm