ಅಂಕೋಲಾ: ಕರಾವಳಿಗರ ದಶಕಗಳ ಬೇಡಿಕೆಯಾಗಿರುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಸರ್ಕಾರದ ಸಮಿತಿಯು ಸೆ.26ರಿಂದ 28ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದೆ. ಇದರಿಂದಾಗಿ ಯೋಜನೆ ಜಾರಿಯಾಗುವ ಬಗೆಗಿನ ಉತ್ತರ ಕನ್ನಡಿಗರ ಕನಸಿಗೆ ರೆಕ್ಕೆಪುಕ್ಕಗಳು ಬಂದಿರುವ ಈ ಸಂದರ್ಭದಲ್ಲೇ ಬೆಂಗಳೂರು ಮಟ್ಟದಲ್ಲಿ ಕೆಲ ಪರಿಸರವಾದಿಗಳು ಮತ್ತೆ ಯೋಜನೆಗೆ ಅಡ್ಡಗಾಲು ಇಡುತ್ತಿರುವುದು ಬೆಳಕಿಗೆ ಬಂದಿದೆ.
ಹೌದು, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನಗೊಂಡರೆ ಕಾರವಳಿ ಹಾಗೂ ಉತ್ತರಕರ್ನಾಟಕ ಭಾಗದವರಿಗೆ ಸಾಕಷ್ಟು ಅನುಕೂಲಗಳು ಆಗಲಿದೆ. ಯೋಜನೆಯ ಅಂತಿಮ ಘಟ್ಟ ಎನ್ನಲಾಗುತ್ತಿರುವ, ಕೇಂದ್ರ ಸರ್ಕಾರದ ಸಮಿತಿಯ ಸ್ಥಳ ಪರಿಶೀಲನೆಯ ಬಳಿಕ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೆ.28ರಂದು ಹಮ್ಮಿಕೊಂಡಿರುವ ಸಾರ್ವಜನಿಕರ ಸಭೆ ನಡೆಯಲಿದೆ.
ಅದಕ್ಕೂ ಪೂರ್ವ ಅಭಿಪ್ರಾಯವನ್ನು ಲಿಖಿತವಾಗಿ ಸೆ.21ರೊಳಗಾಗಿ ಜಿಲ್ಲಾಧಿಕಾರಿ ಕಚೇರಿಯ ಇ- ಮೇಲ್‌ಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ, ಬೆಂಗಳೂರು ಮಟ್ಟದ ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಯೋಜನಾ ವಿರೋಧಿ ದೂರುಗಳನ್ನು ಇಮೇಲ್ ಮಾಡಲು ಜನರನ್ನ ಪ್ರಚೋದಿಸುತ್ತಿದ್ದು, ಇದು ಉತ್ತರಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.
ಕರಾವಳಿಗೆ ಏನು ಬೇಕೆಂಬುದು ಕರಾವಳಿಗರಿಗೆ ಗೊತ್ತಿದೆ, ಹೀಗಿರುವಾಗ ಬೆಂಗಳೂರಿನ ಕಾಂಕ್ರೀಟ್ ಕಾಡಲ್ಲಿ ಕುಳಿತು ಪರಿಸರದ ಬಗ್ಗೆ ಮಾತನಾಡುವವರ ಕುರಿತು ಜಿಲ್ಲೆಯ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.
ಅದೇನೆ ಇರಲಿ, ಜಿಲ್ಲೆಗೆ ಬರುವ ಕೇಂದ್ರ ಸಮಿತಿ ಕೂಡ ಜಿಲ್ಲೆಯ ಜನರ ಬೇಡಿಕೆಗಳನ್ನೆ ಆಲಿಸಬೇಕೆ ಹೊರತು, ಎಲ್ಲೋ ಕುಳಿತು ಇಮೇಲ್, ಪಿಟಿಶನ್ ಹಾಕುವವರದ್ದಲ್ಲ ಎನ್ನುವುದು ಉತ್ತರಕನ್ನಡಿಗರ ಮಾತಾಗಿದ್ದು, ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಸದ್ಯ ಯೋಜನೆ ನಿರ್ಧರಿತವಾಗಿದೆ.
PublicNext
21/09/2022 08:42 pm