ಕುಂದಾಪುರ: ಸೌಕೂರು ಏತ ನೀರಾವರಿ ಯೋಜನೆಯು ತಲ್ಲೂರು ಹಾಗೂ ಉಪ್ಪಿನಕುದ್ರು ಭಾಗಕ್ಕೆ ಅನ್ಯಾಯವಾಗಿದೆ, ಮೂಲ ಯೋಜನೆ ತಿರುಚಲಾಗಿದೆ ಎಂಬ ಗಂಭೀರ ಆರೋಪವನ್ನು ಗ್ರಾಮಸ್ಥ ಚಂದ್ರಮ ತಲ್ಲೂರು ಮಾಡಿದರು.
ತಾಲ್ಲೂಕಿನ ತಲ್ಲೂರಿನಲ್ಲಿನರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ತಲ್ಲೂರು ಗ್ರಾಮಪಂಚಾಯತ್ ಗ್ರಾಮಸಭೆಯಲ್ಲಿ ಈ ಆರೋಪ ಕೇಳಿಬಂದಿದೆ.
ಏತ ನೀರಾವರಿ ಯೋಜನೆ ಗುತ್ತಿಗೆದಾರರು ಬಹುತೇಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದವರು ಆರೋಪಿಸಿದರು. ಅಲ್ಲದೆ ಎರಡೂ ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿನ ತಾತ್ವಾರ ಇದ್ದು ಏತ ನೀರಾವರಿ ಯೋಜನೆ ಮರೀಚಿಕೆಯಾಗಿರುವುದು ದುರಂತ. ಆ ಭಾಗದ ಗ್ರಾಮಪಂಚಾಯತ್ ಸದಸ್ಯರುಗಳು ಧ್ವನಿಯೆತ್ತದಿರುವುದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಗಿರೀಶ್ ಎಸ್. ನಾಯಕ್, ತಲ್ಲೂರು ಮತ್ತು ಉಪ್ಪಿನಕುದ್ರು ನೀರಿನ ಅಗತ್ಯತೆ ಬಗ್ಗೆ ಈಗಾಗಾಲೇ ಶಾಸಕರ ಬಳಿ ಮನವಿ ಮಾಡಿದ್ದೇವೆ ಎಂದರು. ಏತ ನೀರಾವರಿ ಕಾಮಗಾರಿಯ ಹಿನ್ನೆಲೆ ವಿದ್ಯುತ್ ಸಂಪರ್ಕದ ಕುರಿತು ಗ್ರಾಮಪಂಚಾಯತ್ ಅನುಮತಿ ಪಡೆಯದೆ ಕೆಲಸ ಮಾಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಉಪ್ಪಿನಕುದ್ರು ಚಿಪ್ಪು ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕೆಂದು ಈ ಹಿಂದಿನ ಗ್ರಾಮಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ನೀರಿನಲ್ಲಿ ಕೆಲಸ ಮಾಡುವವರು ಏನಾದರೂ ಅವಘಡವಾದರೆ ಪರಿಹಾರಕ್ಕೆ ಇಲಾಖಾ ಗುರುತಿನ ಚೀಟಿ ಸಹಕಾರಿಯಾಗುತ್ತದೆ ಎಂದು ಚಂದ್ರಮ ತಲ್ಲೂರು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ವೆಂಕಟ, ವಿಜೇಂದ್ರ, ಅಶೋಕ್ ಮಾತನಾಡಿ ಜೀವನಭದ್ರತೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
Kshetra Samachara
31/03/2022 04:37 pm