ಉಡುಪಿ: ಚುನಾವಣಾ ವರ್ಷದಲ್ಲಿ ಪಕ್ಷಾಂತರ ನಡೆಯುವುದು ಸಾಮಾನ್ಯ. ಹಾಗಿರುವಾಗ, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡದ್ದೂ ರಾಜಕೀಯದ ಭಾಗವೇ ಆಗಿದೆ. ಕಾಂಗ್ರೆಸ್ ಪಕ್ಷ ಹಿಂದೆಯೂ ಅನೇಕ ಬಾರಿ ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿದೆ.
ಪಕ್ಷದ ಮೇಲಿನ ಪ್ರೀತಿ ಹಾಗೂ ಜಾತ್ಯಾತೀತ ಸಿದ್ಧಾಂತದ ಮೇಲಿನ ನಂಬಿಕೆಯಿರುವ ಲಕ್ಷಾಂತರ ಕಾರ್ಯಕರ್ತರು ಪಕ್ಷದಲ್ಲಿರುವಾಗ ಪಕ್ಷವನ್ನು ಸಂಘಟಿಸಿ, ಅಧಿಕಾರದತ್ತ ಕೊಂಡೊಯ್ಯುವುದು ಕಷ್ಟವಾಗದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ.
ಪಕ್ಷದಲ್ಲಿ ಕಾರ್ಯಕರ್ತರು ಹಾಗೂ ನಾಯಕರಿಗೆ ಕೊರತೆ ಇಲ್ಲ. ಹಾಗಾಗಿ ಅಭ್ಯರ್ಥಿಯ ಕೊರತೆಯೂ ಕಾಡದು ಎಂಬ ವಿಶ್ವಾಸವಿದೆ. ಏನಿಲ್ಲದಿದ್ದರೂ ಕಾರ್ಯಕರ್ತರು ಸೂಚಿಸುವ ನಾಯಕನೇ ಅಭ್ಯರ್ಥಿಯಾಗಿ ವಿಜಯದ ಕಿರೀಟ ಧರಿಸಿದ ಇತಿಹಾಸವೂ ಕಾಂಗ್ರೆಸ್ ಪಕ್ಷದಲ್ಲಿದೆ. ಕಾಂಗ್ರೆಸ್‌ನಲ್ಲಿ ಹಲವಾರು ಮಂದಿ ಅನುಭವೀ ಹಾಗೂ ಉತ್ಸಾಹೀ ಕಾರ್ಯಕರ್ತರಿದ್ದಾರೆ. ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ನಾಯಕರುಗಳೂ ಅನೇಕರಿದ್ದಾರೆ. ಅವರೆಲ್ಲರ ಬೆಂಬಲದೊಂದಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ.
ರಾಜಕೀಯದಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಹಾಗಾಗಿ ಪಕ್ಷದ ಕಾರ್ಯಕರ್ತರು ಎದೆಗುಂದದೆ, ಈ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ, ಹುರುಪಿನಿಂದ ಪಕ್ಷವನ್ನು ಪುನರ್ ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆಗೆ, ಕರ್ನಾಟಕ ಕರಾವಳಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಕಾರಣರಾಗೋಣ ಎಂಬುದಾಗಿ ಪಕ್ಷದ ಎಲ್ಲ ಅಭಿಮಾನಿಗಳಲ್ಲಿ ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Kshetra Samachara
08/05/2022 05:49 pm