ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಇವರು ದೇವೇಂದ್ರ ಸುವರ್ಣ.2014 ರಲ್ಲಿ ಬೈಕ್ ಅಪಘಾತವಾದ ದಿನದಿಂದ ಈ ದಿನದವರೆಗೂ ಹೋರಾಟ ಮಾಡುತ್ತಿದ್ದಾರೆ.ಮೊದಲನೆಯದಾಗಿ ತಮಗೆ ಅಪಘಾತ ವಿಮೆ ಸಿಕ್ಕಿಲ್ಲ. ಎರಡನೆಯದಾಗಿ ಮೃತ ಸರಕಾರಿ ನೌಕರ ,ಸಹೋದರನ ಅನುಕಂಪದ ಆಧಾರದಲ್ಲಿ ತಮಗೆ ನೌಕರಿ ಸಿಕ್ಕಿಲ್ಲ ಎಂಬುದು ಇವರ ಹೋರಾಟಕ್ಕೆ ಕಾರಣ.
ಇದೇ ಕಾರಣಕ್ಕೆ ದೇವೇಂದ್ರ ಸುವರ್ಣ ಈಗ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾರೆ.ಉಡುಪಿ ತಾಲೂಕು ವಡ್ಡರ್ಸೆ ಗ್ರಾಮದ ದೇವೇಂದ್ರ ಸುವರ್ಣ, ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದರು. 2014 ರಲ್ಲಿ ಬೈಕ್ ಅಪಘಾತದಲ್ಲಿ ಒಂದು ಕಣ್ಣು, ಕಿವಿಗೆ ಹಾನಿಯಾಗಿದೆ.ಇನ್ನು ತಂದೆ, ತಾಯಿ, ಮಡದಿ, ಇಬ್ಬರು ಮಕ್ಕಳಿಗೆ ಆಧಾರವಾಗಿದ್ದ ಅವಿವಾಹಿತ ಸಹೋದರ ಶಶಿಧರ ಬ್ರಹ್ಮಾವರ ಮೆಸ್ಕಾಂ ಮೈನ್‌ಮ್ಯಾನ್ ಆಗಿದ್ದರು.
2016ರಂದು ಮೇ 20ರಂದು ಕರ್ತವ್ಯದಲ್ಲಿದ್ದಾಗ ಶಾಕ್ ಹೊಡೆದು ಸಾವನ್ನಪ್ಪಿದ್ದರು. 10 ಲಕ್ಷ ರೂ. ಪರಿಹಾರವನ್ನು ಇಲಾಖೆ ನೀಡಿದ್ದು, ತಾಯಿ ಹೆಸರಲ್ಲಿ ಠೇವಣಿಯಿದೆ. ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬೇಡಿಕೆ ಅವಿವಾಹಿತ ಸಹೋದರ, ಸಹೋದರಿ ಇದ್ದರಷ್ಟೇ ಈಡೇರಿಸಲು ಸಾಧ್ಯವೆಂದು ಮೆಸ್ಕಾಂ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಶೇ. 50 ಅಂಗ ವೈಕಲ್ಯದ ಕಾರಣಕ್ಕೆ ರಾಜ್ಯ ಸರಕಾರದಿಂದ ಮಾಸಿಕ 600 ರೂ. ಪಿಂಚಣಿ ಪಡೆಯುತ್ತಿರುವ ದೇವೇಂದ್ರ ಸುವರ್ಣರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ. ದೊರೆತಿದೆ. ಮಡದಿ ಬೀಡಿ ಕಟ್ಟುತ್ತಿದ್ದಾರೆ. ಅನುಕಂಪದ ಆಧಾರದಲ್ಲಿ ಸರಕಾರಿ ಹುದ್ದೆ ನೀಡುವಂತೆ ಏಳು ವರ್ಷಗಳಿಂದ ಹೋರಾಡುತ್ತಿದ್ದಾರೆ.
ದೇವೇಂದ್ರ ಸುವರ್ಣ ಜನತಾ ದರ್ಶನ ಮೂಲಕ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಕ್ಕೆ ಲೆಕ್ಕವೇ ಇಲ್ಲ.ಇದೀಗ ಮಣಿಪಾಲ ರಜತಾದ್ರಿ ಮುಂದೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿದಿದ್ದಾರೆ.
ತಮಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ತನಕ ಹೋರಾಟ ಮುಂದುವರಿಸುವುದಾಗಿ ದೇವೇಂದ್ರ ಸುವರ್ಣ ಪಟ್ಟುಹಿಡಿದು ಕುಳಿತಿದ್ದಾರೆ. ಇವರ ನೋವು ಕೇಳುವವರಾರು?
PublicNext
20/05/2022 04:52 pm