ಕುಂದಾಪುರ :ವೈದ್ಯರು ರೋಗಿಯೊಬ್ಬನ ಜೀವ ಉಳಿಸಿದರೆ, ನ್ಯಾಯವಾದಿ ವ್ಯಕ್ತಿಯೊಬ್ಬನ ಹಕ್ಕನ್ನು ಉಳಿಸುವವ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್ ನಟರಾಜ್ ಹೇಳಿದರು. ಅವರು ಕುಂದಾಪುರದ ಗಿಳಿಯಾರು ಕುಶಲ್ ಶೆಟ್ಟಿ ರೋಟರಿ ಸಭಾ ಭವನದಲ್ಲಿ ಕುಂದಾಪುರ ವಕೀಲರ ಸಂಘದ 2022-24 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿಯ ಹಕ್ಕು ರಕ್ಷಿಸುವುದೆಂದರೆ ಇಡೀ ಒಂದು ಕುಟುಂಬವನ್ನು ರಕ್ಷಣೆ ಮಾಡಿದಂತೆ. ಆಗ ಆ ವ್ಯಕ್ತಿಯ ಕುಟುಂಬ ತಲೆ ತಲಾಂತರದವರೆಗೂ ವಕೀಲರನ್ನು ನೆನಪಿಸಿಕೊಳ್ಳುತ್ತಿರುತ್ತದೆ ಹಾಗೂ ವಕೀಲರ ನಮ್ಮ ವೃತ್ತಿ,
ಆದರೆ ಮಾನವೀಯತೆಯ ಪೃವೃತ್ತಿ ಎಂಬಂತೆ ವಕೀಲರು ಕೆಲಸ ಮಾಡಬೇಕಾಗಿದೆ. ಕೆಲವೊಮ್ಮೆ ಆಹಾರ, ಹಣವಿಲ್ಲದೆ ಬದುಕಬಹುದು, ಆದರೆ ಕಕ್ಷಿಗಾರನ ಹಕ್ಕನ್ನೇ ಯಾರಾದರೂ ಕಿತ್ತುಕೊಂಡರೆ ಆತ ಬದುಕುವುದು ಕಷ್ಟ. ಅದನ್ನು ಕಾಪಾಡುವ ಕೆಲಸ ವಕೀಲರದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಆರ್. ನಟರಾಜ್ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಮಾತನಾಡಿ, ನಾಗರಿಕರ ಹಕ್ಕು ರಕ್ಷಣೆ ಮಹಾನ್ ಕೆಲಸ ಅನ್ನುವುದನ್ನು ಮರೆಯಕೂಡದು, ಇಡೀ ದೇಶದಲ್ಲಿ ಮದ್ರಾಸ್ ಹೈಕೋರ್ಟ್ ಅರ್ಜಿ ವಿಲೇವಾರಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೊಸ ಮತ್ತು ಹಳೆ ಕೇಸುಗಳು ಪ್ರತಿ ವರ್ಷ ಶೀಘ್ರದಲ್ಲಿ ಇತ್ಯರ್ಥವಾಗುತ್ತಿವೆ. ಇದೇ ಮಾದರಿಯಲ್ಲಿ ಕುಂದಾಪುರ ವಕೀಲರ ಸಂಘ ಕೆಲಸ ನಿರ್ವಹಿಸಿ ಇಡೀ ದೇಶದಲ್ಲಿನಂಬರ್ ಒನ್ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಅವರು ಆಶಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ. ಎನ್ ಮಾತನಾಡಿ, ಬೈಂದೂರಿನಲ್ಲಿ ವಾರದ 2 ದಿನ ಕೋರ್ಟ್ ಕಲಾಪ ನಡೆಯುತ್ತಿದ್ದು, ಶೀಘ್ರವೇ ಪೂರ್ಣಕಾಲಿಕ ಕೋರ್ಟ್ ಆರಂಭವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, ಹಿರಿಯ ವಕೀಲರುಗಳು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಈ ಬಾರ್ ಅಸೋಸಿಯೇಶನ್ ನಲ್ಲಿ ಕಿರಿಯನಾದ ತನ್ನನ್ನು 2010-12ರಲ್ಲಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿ, 2016-18ನೇ ಸಾಲಿನಲ್ಲಿ ಅಧ್ಯಕ್ಷನನ್ನಾಗಿ ಹಾಗೂ 2ನೇ ಬಾರಿ 2022-24 ನೇ ಸಾಲಿನಲ್ಲಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಕುಂದಾಪುರ ಬಾರ್ ಅಸೋಸಿಯೇಶನ್‍ನ ಎಲ್ಲಾ ಸದಸ್ಯರಿಗೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.
ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ರವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಹಾಗೂ ಉಪಾಧ್ಯಕ್ಷೆ ಬೀನಾ ಜೊಸೆಫ್, ಜತೆ ಕಾರ್ಯದರ್ಶಿ ರಿತೇಶ್ ಬಿ ಮತ್ತು ಕೋಶಾಧಿಕಾರಿ ಹಾಲಾಡಿ ದಿನಕರ ಕುಲಾಲ್ ಇವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿಯವರು ಪದಪ್ರದಾನ ಮಾಡಿದರು.ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷೆ ಬೀನಾ ಜೊಸೆಫ್ ಜತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಉಪಸ್ಥಿತರಿದ್ದರು.
ಹಿರಿಯ ವಕೀಲರಾದ ಟಿ. ಬಿ ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ಕುಮಾರಿ ವನಿತಾ ಪ್ರಾರ್ಥಿಸಿದರು, ಸಂಘದ ಮಾಜಿ ಅಧ್ಯಕ್ಷ ಕಾಳಾವರ ಉದಯ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮತ್ತು ಕಾಳಾವರ ಪ್ರದೀಪ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು,
ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಮತ್ತು ರವಿ ಶೆಟ್ಟಿ ಮಚ್ಚಟ್ಟು ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
29/04/2022 12:39 pm