ಉದ್ಯಾವರ : ಈ ಇಂಟರ್‍ನೆಟ್ ಯುಗದಲ್ಲಿ ದುರುದ್ದೇಶಪೂರಿತವಾಗಿ ಮೂಲಭೂತವಾದಿಗಳು ತಪ್ಪರ್ಥೈಸಿಕೊಂಡು ನೆಹರೂರವರನ್ನು ತುಚ್ಚವಾಗಿ ಬಿಂಬಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ನೆಹರೂರವರು ಈ ದೇಶವನ್ನು ಜಾತ್ಯಾತೀತ ನೆಲೆ ಆಧಾರದಲ್ಲಿ ಕಟ್ಟಿದವರು. ಸ್ವಾತಂತ್ರ್ಯ ದೊರೆತಾಗ ದೇಶವನ್ನು ಧರ್ಮ ಆಧಾರದಲ್ಲಿ ಪರಿಗಣಿಸದೇ ಜಾತ್ಯಾತೀತ ನೆಲೆಯಲ್ಲಿ ಪರಿಗಣಿಸಿ ಆಡಳಿತ ನಡೆಸಿದ್ದರ ಪರಿಣಾಮವೇ ಇಂದು ದೇಶ ವಿಶ್ವದ ಮೂರನೇ ಸ್ಥಾನದಲ್ಲಿ ನಿಂತಿದೆ.
ಧರ್ಮದ ವಿಷಯದಲ್ಲಿ ತಟಸ್ಥವಾಗಿ ಉಳಿಯಬೇಕು, ಈ ದೇಶದ ಸಮಸ್ಯೆಗಳಿಗೆ ಸಮಾಜವಾದ ಮದ್ದು ಎಂದು ಈ ದೇಶದ ಅಭಿವೃದ್ಧಿಗೆ ತಳಪಾಯವನ್ನು ಹಾಕಿದರು.
ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂರು ಐಕ್ಯತೆಯಿಂದ ಹೋರಾಡಿದರು. ಆ ಪರಂಪರೆ ಇಂದೂ ಮುಂದುವರಿಯುತ್ತಿದೆ.
ಅದಕ್ಕೆ ನೆಹರೂ ಚಿಂತನೆ ಕಾರಣ. ನೆಹರೂ ಕಟ್ಟಿದ ದೇಶದ ಅಭಿವೃದ್ಧಿಯ ತಳಪಾಯ ಎಷ್ಟು ಭದ್ರವಾಗಿದೆ ಎಂದರೆ ಇವತ್ತಿಗೂ ಅದನ್ನು ಏನೂ ಮಾಡಲು ಸಾಧ್ಯವಿಲ್ಲ.
ನೆಹರೂ ವಿರೋಧಿಗಳು ಅದರ ಬಗ್ಗೆ ಎಂತಹ ಅಪಪ್ರಚಾರ ಮಾಡಿದರೂ ಅವರಿಗೇನೂ ಆಗೋದಿಲ್ಲ. ಏಕೆಂದರೆ ನೆಹರೂ ಒಬ್ಬ ವ್ಯಕ್ತಿಯಲ್ಲ, ಅದೊಂದು ಐಡಿಯೋಲಜಿ, ಅದೊಂದು ಸಿದ್ದಾಂತ, ಅದೊಂದು ಆಲೋಚನೆ ಎಂದು ಪತ್ರಕರ್ತರೂ ಸಾಮಾಜಿಕ ಕಾರ್ಯಕರ್ತರೂ ಆದ ಹರ್ಷ ಕುಮಾರ್ ಕುಗ್ವೆ ಅವರು ಹೇಳಿದರು.
ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‍ನ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ನೆಹರೂ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ನುಡಿದರು.
ಫ್ರೆಂಡ್ಸ್ ಸರ್ಕಲ್ ನ ಮಾಜಿ ಅಧ್ಯಕ್ಷ ಆಬಿದ್ ಆಲಿಯವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಕೊನೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ಧನ್ಯವಾದವಿತ್ತರು.
ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
23/11/2020 07:56 pm